ADVERTISEMENT

ಪತ್ರಿಕಾ ವಿತರಕರ ಜಿಲ್ಲಾ ಸಮ್ಮೇಳನ ಮಾರ್ಚ್ 2ಕ್ಕೆ

ಲಾಂಛನ, ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 14:12 IST
Last Updated 20 ಫೆಬ್ರುವರಿ 2025, 14:12 IST
ಶ್ರವಣಬೆಳಗೊಳದ ಜೈನ ಮಠದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಸಮ್ಮೇಳನದ ಲಾಂಛನ ಹಾಗೂ ಆಹ್ವಾನ ಪತ್ರಿಕೆಯನ್ನು ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬಿಡುಗಡೆಗೊಳಿಸಿದರು
ಶ್ರವಣಬೆಳಗೊಳದ ಜೈನ ಮಠದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಸಮ್ಮೇಳನದ ಲಾಂಛನ ಹಾಗೂ ಆಹ್ವಾನ ಪತ್ರಿಕೆಯನ್ನು ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬಿಡುಗಡೆಗೊಳಿಸಿದರು   

ಶ್ರವಣಬೆಳಗೊಳ: ‘ಪತ್ರಿಕಾ ವಿತರಕರು ಸೂರ್ಯ ಉದಯಿಸುವ ಮುನ್ನವೇ ಶ್ರಮವಹಿಸಿ ದುಡಿಯುವ ಕಾಯಕ ಯೋಗಿಗಳಾಗಿದ್ದು, ಅವರು ಸೂರ್ಯವಂಶದವರು’ ಎಂದು ಶ್ರವಣಬೆಳಗೊಳದ ಜೈನ ಮಠದ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ಲಾಘಿಸಿದರು.

ಇಲ್ಲಿನ ಜೈನ ಮಠದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಸಮ್ಮೇಳನದ ಲಾಂಛನ ಹಾಗೂ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಸೂರ್ಯ ಪ್ರತಿನಿತ್ಯ ದಿನವನ್ನು ಪ್ರಾರಂಭಿಸಿ ಬೆಳಕು ನೀಡುವ ಹಾಗೆ ಪ್ರತಿ ದಿನದ ವಿಚಾರಗಳನ್ನು ವಿಶ್ವದಾದ್ಯಂತ ಜನರಿಗೆ ತಿಳಿಸುವ ಶ್ರಮಿಕ ವರ್ಗದವರೇ ಪತ್ರಿಕಾ ವಿತರಕರು. ಪ್ರಪಂಚ ಎಷ್ಟೇ ಮುಂದುವರಿದರೂ ಸಾಮಾಜಿಕ ಮಾಧ್ಯಮ, ಟಿವಿ, ಯೂಟ್ಯೂಬ್ ಇದ್ದರೂ ಪ್ರತಿನಿತ್ಯ ಜನರು ಕಾಫಿ ಜೊತೆಗೆ ದಿನಪತ್ರಿಕೆಗಳನ್ನು ಓದದಿದ್ದರೆ ಆ ದಿನ ಕಳೆಯುವುದೇ ಇಲ್ಲ. ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಮುಂಜಾನೆಯೇ ಮನೆ ಮನೆಗಳಿಗೆ ಪತ್ರಿಕೆ ಹಾಕುವ ವಿತರಕರು ಜಿಲ್ಲೆಯಲ್ಲಿ ಒಟ್ಟುಗೂಡಿ ಸಮ್ಮೇಳನ ಆಯೋಜಿಸುತ್ತಿರುವುದು ಉತ್ತಮ ಸಂಗತಿ’ ಎಂದರು.

ADVERTISEMENT

‘ಪತ್ರಿಕಾ ವಿತರಕರು ಹಾಗೂ ಪತ್ರಕರ್ತರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೆಚ್ಚು ಗೌರವಿಸುತ್ತಿದ್ದರು. ಪತ್ರಕರ್ತರ ಸಮ್ಮೇಳನ, ವಿದ್ವತ್ ಸಮ್ಮೇಳನ, ಯುವ ಸಮ್ಮೇಳನ ಹಾಗೂ ಮಹಿಳಾ ಸಮ್ಮೇಳನಗಳನ್ನು ನಡೆಸುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿದ್ದರು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಮಾತನಾಡಿ, ‘ಮಾರ್ಚ್‌ 2ರಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ರಾಜ್ಯದಲ್ಲೇ ಪ್ರಥಮ ಪತ್ರಿಕಾ ವಿತರಕರ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಚಾರ. ವಿತರಕರ ಸಂಘದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಅವರು ನಮ್ಮ ತಾಲ್ಲೂಕನ್ನು ಆಯ್ಕೆ ಮಾಡಿದ್ದಾರೆ. ರಾಜ್ಯದಾದ್ಯಂತ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಗಮಿಸಲಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕು ವಿತರಕರು ಸಮ್ಮೇಳನಕ್ಕೆ ಆಗಮಿಸಬೇಕು’ ಎಂದು ಕೋರಿದರು.

ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕಿರಣ್, ತಾಲ್ಲೂಕು ವಿತರಕರ ಒಕ್ಕೂಟದ ಕಾರ್ಯದರ್ಶಿ ಎ.ಎಂ.ಜಯರಾಂ, ಪತ್ರಕರ್ತ ನಂದನ್‌ ಪುಟ್ಟಣ್ಣ, ನಾಗೇಂದ್ರ ರಾ.ಯ, ಐ.ಕೆ.ಮಂಜುನಾಥ್, ಹೊಳೇನರಸೀಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪೇಪರ್ ದಿನೇಶ್, ತಾಲ್ಲೂಕು ಅಧ್ಯಕ್ಷ ಮೋಹನ್‌ಕುಮಾರ್, ಕಾರ್ಯದರ್ಶಿ ಬಿ.ಸುರೇಶ್, ವಿತರಕರಾದ ಕೃಷ್ಣಪ್ರಸಾದ್, ಸಿ.ವಿ.ಮಂಜುನಾಥ್, ಸಿ.ಎಸ್.ವೆಂಕಟೇಶ್, ಚಂದ್ರಶೇಖರ್, ರಂಗನಾಥ್, ವಿಶ್ವಾಸ್ ಇದ್ದರು.

ಜಿಲ್ಲಾ ಸಮ್ಮೇಳದ ಲಾಂಛನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.