ADVERTISEMENT

‘ಅಂಬೇಡ್ಕರ್‌ ಬರಹ ಓದುವುದು ಅಗತ್ಯ’

ಪ್ರತಿಭಾ ಪುರಸ್ಕಾರದಲ್ಲಿ ಲೇಖಕ ವಿಠಲ್‌ ವಾಘನ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:36 IST
Last Updated 6 ಡಿಸೆಂಬರ್ 2021, 16:36 IST
ಹಾಸನದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಕೆ.ಜಿ.ಸುರೇಶ್‌, ಕರಿಯಯ್ಯ, ಗಂಗಾಧರ್‌, ಕೆ.ಸಿ.ರಾಜು, ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. 
ಹಾಸನದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಕೆ.ಜಿ.ಸುರೇಶ್‌, ಕರಿಯಯ್ಯ, ಗಂಗಾಧರ್‌, ಕೆ.ಸಿ.ರಾಜು, ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.    

ಹಾಸನ: ‘ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನು ಪೂಜೆ‌ ಮಾಡುವ ಬದಲು ಅವರ ಬರಹಗಳನ್ನು ಓದಬೇಕು’ ಎಂದು ಲೇಖಕ ಕಲ್ಬುರ್ಗಿಯ ವಿಠಲ್‌ ವಾಘನ್‌ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಉದಯ್‌ ಎಜುಕೇಷನ್‌ ಟ್ರಸ್ಟ್‌ ಸೋಮವಾರ ಆಯೋಜಿಸಿದ್ದಅಂಬೇಡ್ಕರ್‌ ಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದಅವರು, ‘ಅಂಬೇಡ್ಕರ್ ಹಾಗೂ ಬುದ್ಧನ ವಿಚಾರಗಳು ಕಾಲ್ಪನಿಕವಲ್ಲ. ಎಲ್ಲವೂ ಇಂದಿಗೂ ದಾಖಲೆಗಳ ರೂಪದಲ್ಲಿವೆ. ಅಂಬೇಡ್ಕರ್‌ 53 ವಿಷಯಗಳಲ್ಲಿ ಅಧ್ಯಯನ ಮಾಡಿ ಸಂವಿಧಾನರಚನೆ ಮಾಡಿದರು’ ಎಂದರು.

‘ಅಂಬೇಡ್ಕರ್‌ ಅವರನ್ನು ಅಧ್ಯಯನ ಮಾಡದೇ ಕೇವಲ ಪ್ರವಚನಗಳನ್ನು ಕೇಳಿದರೆ ಅರ್ಥೈಸುವುದು ಕಷ್ಟ. ಅವರು ಏನು ಎಂಬುದು ಶೇ 90ರಷ್ಟು ಮಂದಿಗೆ ಇನ್ನೂ ಗೊತ್ತಿಲ್ಲ. ನಮಸ್ಕರಿಸುವ ವಿದಾತರಲ್ಲ, ಅವರು ಬಡವರಿಗೆ ಬದುಕು ಕಟ್ಟಿಕೊಳ್ಳಲು‌ ನೆರಳಾಗಿ‌ ನಿಂತ ಭಾಗ್ಯವಿದಾತ’ ಎಂದು ವಿವರಿಸಿದರು.

ADVERTISEMENT

‘ಮೈಯಲ್ಲಿ ಹರಿದ ಬಟ್ಟೆ ಇದ್ದರೂ ಚಿಂತೆ ಇಲ್ಲ, ಕೈಯಲ್ಲಿ ಒಂದು ಪುಸ್ತಕ ಇರಲಿ’ ಎಂದು ಅಂಬೇಡ್ಕರ್‌ಹೇಳಿದ್ದರು. ಸಂವಿಧಾನದ ಮೀಸಲಾತಿ ಪಡೆದು ಆಯ್ಕೆಯಾದ ಶಾಸಕರು, ಸಂಸದರು, ಜನಪ್ರತಿನಿಧಿಗಳು ಇಂದು ಎಷ್ಟು ಜ‌ನ ಸ್ವಾಭಿಮಾನದಿಂದ ಇದ್ದಾರೆ? ಮುಂದಿನ ತಲೆಮಾರುಗಳಿಗೆಆಗುವಷ್ಟು ಹಣ ಸಂಗ್ರಹಿಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟರೂ ಯಾರು ಹಿಂದುಳಿದವರ ಪರವಾಗಿ ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ‘ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡುವ ರೀತಿಸಂವಿಧಾನ ನೀಡಿದ್ದಾರೆ. ಹುಡಾ ವತಿಯಿಂದ ನಗರದಲ್ಲಿ ಬೌದ್ಧ ಸಮಾಜಕ್ಕೆ ಜಾಗ ಕೊಡಿಸಿದ್ದೇನೆ. ವ್ಯಕ್ತಿಯ ಒಳಿತಿಗೆ ಕೆಲಸ ಮಾಡದೇ ಸಮಾಜಕ್ಕೆ, ಸಮುದಾಯಕ್ಕೆ ಒಳಿತಾಗುವ ರೀತಿಯ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಅಂಬೇಡ್ಕರ್ ವಿಚಾರ ಇಟ್ಟುಕೊಂಡು ವಿದ್ಯಾರ್ಥಿಗಳು ಜ್ಞಾನರ್ಜನೆ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು. ಶ್ರಮವಹಿಸಿ ತಪಸ್ಸಿನ ರೀತಿ ಓದಿದರೆ ಮಾತ್ರ ಉತ್ತಮಸ್ಥಾನಕ್ಕೆ ಏರಲು ಸಾಧ್ಯ’ ಎಂದರು

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಯಿತು ಹಾಗೂ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಶಿರಾ ತಾಲ್ಲೂಕು ಶೀಡ್ಲಕೋಣ ಮಠದ ಸಂಜಯ್ ಕುಮಾರ ಸ್ವಾಮೀಜಿ, ಹುಡಾ ಅಧ್ಯಕ್ಷ ಲಲಾಟಮೂರ್ತಿ, ನಗರಸಭೆ ಅಧ್ಯಕ್ಷ ಆರ್.ಮೋಹನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಮಂಜುನಾಥ್, ಉದಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಯಶ್ವಂತ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಕೆ. ಸಂದೇಶ್, ಕೆ.ಈರಪ್ಪ, ಜಿ.ಒ. ಮಹಾಂತಪ್ಪ, ಆಕಾಶವಾಣಿ ಮುಖ್ಯಸ್ಥ ಎಂ.ಶಿವಕುಮಾರ್. ಮಲೆನಾಡು ಎಂಜಿನಿಯರಿಂಗ್‌ ಕಾಲೇಜು ಪ್ರಾಧ್ಯಾಪಕ ಇಂದಿರಾ ಬಹದ್ದೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.