ADVERTISEMENT

ಸಕಲೇಶಪುರ: ಆನೆ ಕಾರಿಡಾರ್‌ಗೆ ಪರ–ವಿರೋಧ

ಹೆಚ್ಚಿನ ಪರಿಹಾರ ನೀಡಿ ಭೂಸ್ವಾಧೀನಪಡಿಸಿಕೊಳ್ಳಲು ಗ್ರಾಮಸ್ಥರ ಮನವಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 4:31 IST
Last Updated 31 ಮಾರ್ಚ್ 2022, 4:31 IST
ಸಕಲೇಶಪುರ ತಾಲ್ಲೂಕಿನ ಜಗಾಟ ಗ್ರಾಮ
ಸಕಲೇಶಪುರ ತಾಲ್ಲೂಕಿನ ಜಗಾಟ ಗ್ರಾಮ   

ಸಕಲೇಶಪುರ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಆನೆ ಕಾರಿಡಾರ್‌ ನಿರ್ಮಿಸುವ ಪ್ರಸ್ತಾವಕ್ಕೆ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ತಾಲ್ಲೂಕಿನ ಹೊಂಗಡಹಳ್ಳ, ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳ ಹಿಡುವಳಿ ಭೂಮಿ ಸ್ವಾಧೀನಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ, ಇತ್ತೀಚೆಗೆ ಕೆಲ ಭೂ ಮಾಲೀಕರು ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರೊಂದಿಗೆ ಅರಣ್ಯ ಸಚಿವರನ್ನು ಭೇಟಿ ಮಾಡಿ, ಆನೆ ಕಾರಿಡಾರ್‌ಗೆ ಭೂಸ್ವಾಧೀನ ಪಡಿಸಿಕೊಳ್ಳುವಂತೆ ಮನವಿ ಮಾಡಿದ್ದರು.

ಅತಿಯಾದ ಮಳೆ, ಕಾಡು ಪ್ರಾಣಿಗಳ ಹಾವಳಿಯಿಂದ ಬದುಕು ಕಷ್ಟವಾಗಿದೆ. ಸುಮಾರು 3 ಸಾವಿರ ಎಕರೆ ಹಿಡುವಳಿ ಭೂಮಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಿ ಆನೆ ಕಾರಿಡಾರ್‌ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಹಲವರು ಮನವಿ ಸಲ್ಲಿಸುತ್ತಲೇ ಬಂದಿದ್ದರು.

ADVERTISEMENT

ಅರಣ್ಯ ಸಚಿವರು ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರಿಂದ ಆನೆ ಕಾರಿಡಾರ್‌ಗೆ ಭೂಮಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಬಹುತೇಕ ಗ್ರಾಮಸ್ಥರು ತಿಳಿಸಿದ್ದಾರೆ.

‘ಪಶ್ಚಿಮಘಟ್ಟ ಅಂಚಿನಲ್ಲಿರುವ ಹೊಂಗಡಹಳ್ಳ ಹಾಗೂ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ರೈತರ ಬೆಳೆಯನ್ನು ಪ್ರತಿ ವರ್ಷ ಕಾಡಾನೆ, ಕಾಟಿ, ಹಂದಿ ಸೇರಿದಂತೆ ವನ್ಯಜೀವಿಗಳು ನಾಶ ಮಾಡುತ್ತಿವೆ. ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರ ಬದುಕು ಕಷ್ಟದಲ್ಲಿದೆ. ಆದ್ದರಿಂದ ಹೊರ ರಾಜ್ಯದ ಬಂಡವಾಳಶಾಹಿಗಳು ಇಲ್ಲಿ ಭೂಮಿ ಖರೀದಿಸಿ ರೆಸಾರ್ಟ್‌ಗಳನ್ನು ಮಾಡಿ ಪರಿಸರ ನಾಶ ಮಾಡುತ್ತಿದ್ದಾರೆ’ ಎಂದು ಪರಿಸರ ಪ್ರೇಮಿ ಕಿಶೋರ್ ಕುಮಾರ್ ಆರೋಪಿಸಿದರು.

‘ಆನೆ ಕಾರಿಡಾರ್ ನಿರ್ಮಾಣದಿಂದ ಕಾಡಾನೆಗಳ ಉಪಟಳ ಬಗೆಹರಿಯುವುದರ ಜೊತೆಗೆ ಪರಿಸರ ಸಹ ಉಳಿಸಬಹುದು’ ಎಂದರು.

‘ಆನೆ ಕಾರಿಡಾರ್ ಮಾಡಿದರೆ ಸುಮಾರು 400 ಕುಟುಂಬಗಳು ಊರು ಬಿಟ್ಟು ಕಾಡು ಸೇರಬೇಕಾಗುತ್ತದೆ. ಆನೆ ಕಾರಿಡಾರ್‌ ನಿರ್ಮಾಣವೇ ಅವೈಜ್ಞಾನಿಕ. ಸಾವಿರಾರು ಎಕರೆ ಅರಣ್ಯದೊಳಗೆ ನೀರು, ಆಹಾರವಿರುವ ಕಡೆ ಆನೆ ಕಾರಿಡಾರ್ ಸೂಕ್ತ’ ಎಂದು ಹೊಂಗಡಹಳ್ಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

‘ಆನೆ ಕಾರಿಡಾರ್‌ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಪ್ರತಿ ಎಕರೆಗೆ ಕನಿಷ್ಠ ₹20 ಲಕ್ಷ ಪರಿಹಾರ ನೀಡಬೇಕು ಎಂದು ಹಲವು ರೈತರು ಆಗ್ರಹಿಸಿ ಈಗಾಗಲೇ ಒಪ್ಪಿಗೆ ಪತ್ರ ನೀಡಿದ್ದಾರೆ. ಪ್ರಸ್ತಾವ ಸರ್ಕಾರದ ಮುಂದಿದೆ. ಇದೇ ಅಂತಿಮ ಅಲ್ಲ. ಅಧಿಕಾರಿಗಳೊಂದಿಗೆ ಪ್ರತಿ ಗ್ರಾಮಕ್ಕೆ ತೆರಳಿ ಎಲ್ಲರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಾಹಿತಿ ನೀಡಿದರು.

‘ಗ್ರಾಮಸ್ಥರೊಂದಿಗೆ ಚರ್ಚಿಸಿ ತೀರ್ಮಾನ’

‘ಆನೆ ಕಾರಿಡಾರ್‌ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಪ್ರತಿ ಎಕರೆಗೆ ಕನಿಷ್ಠ ₹20 ಲಕ್ಷ ಪರಿಹಾರ ನೀಡಬೇಕು ಎಂದು ಹಲವು ರೈತರು ಆಗ್ರಹಿಸಿ ಈಗಾಗಲೇ ಒಪ್ಪಿಗೆ ಪತ್ರ ನೀಡಿದ್ದಾರೆ. ಪ್ರಸ್ತಾವ ಸರ್ಕಾರದ ಮುಂದಿದೆ. ಇದೇ ಅಂತಿಮ ಅಲ್ಲ. ಅಧಿಕಾರಿಗಳೊಂದಿಗೆ ಪ್ರತಿ ಗ್ರಾಮಕ್ಕೆ ತೆರಳಿ ಎಲ್ಲರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಾಹಿತಿ ನೀಡಿದರು.

***

ಹಿಡುವಳಿ ಭೂಮಿಯಲ್ಲಿ ಕೃಷಿ ಮಾಡದೆ ಊರಿನಿಂದ ದೂರ ಇರುವ ಬೆರಳಣಿಕೆ ಮಂದಿ ಆನೆ ಕಾರಿಡಾರ್‌ಗೆ ಬೇಡಿಕೆ ಇಡುತ್ತಿದ್ದಾರೆ. ಈ ಕಾರಿಡಾರ್‌ಗೆ ಸಂಪೂರ್ಣ ವಿರೋಧ ಇದೆ.

–ಧರ್ಮೇಗೌಡ, ಕಾಗಿನಹರೆ‌

***

ವಂಶ ಪಾರಂಪರ್ಯವಾಗಿ ಕೃಷಿ ನಂಬಿಕೊಂಡು ಬದುಕು ಕಟ್ಟಿಕೊಡಿರುವ ನಮ್ಮನ್ನು ಹೊರ ಹಾಕಿದರೆ ಬದುಕುವುದು ಹೇಗೆ? ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ನುಗುತ್ತಿವೆ.

–ಯತೀಶ್, ಹೊಂಗಡಹಳ್ಳ ಗ್ರಾ.ಪಂ ಸದಸ್ಯ

***

ಮಲೆನಾಡಿನ ಜನರ ಬದುಕು ನಾಶ ಮಾಡುವುದೇ ಈ ಯೋಜನೆ ಉದ್ದೇಶವಾಗಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ.

–ಚಂದ್ರಶೇಖರ್, ಹೊಂಗಡಹಳ್ಳ ಗ್ರಾ.ಪಂ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.