ADVERTISEMENT

‘ನಮ್ಮ ನಡೆ ದ್ವಾರಸಮುದ್ರದ ಕಡೆಗೆ’ ಪಾದಯಾತ್ರೆ

ವಿವಿಧ ಮಠಗಳ ಸ್ವಾಮೀಜಿಗಳು ಭಾಗಿ, ಕೆರೆಗೆ ನೀರು ಹರಿಸುವ ಯೋಜನೆ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 10:51 IST
Last Updated 9 ಫೆಬ್ರುವರಿ 2020, 10:51 IST
ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಉತ್ಸವದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದ್ವಾರಸಮುದ್ರ ಕೆರೆಯಲ್ಲಿ ಪೂಜೆ ನೆರವೇರಿಸಿದರು
ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಉತ್ಸವದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದ್ವಾರಸಮುದ್ರ ಕೆರೆಯಲ್ಲಿ ಪೂಜೆ ನೆರವೇರಿಸಿದರು   

ಹಳೇಬೀಡು: ಇಲ್ಲಿಯ ಚನ್ನಮ್ಮ ನಂಜೇಗೌಡ ಕಲ್ಯಾಣ ಮಂಟಪದಿಂದ ದ್ವಾರಸಮುದ್ರ ಕೆರೆಯವರೆಗೆ ಮಠಾಧೀಶರ ಪಾದಯಾತ್ರೆ ನಡೆಯಿತು.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ರಣಘಟ್ಟ ಒಡ್ಡಿನಿಂದ ಹೊಯ್ಸಳರ ಕಾಲದ ನಾಲೆ ಮುಖಾಂತರ ದ್ವಾರಸಮುದ್ರ ಕೆರೆಗೆ ನೀರು ಹರಿಸುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಸರ್ಕಾರದ ಗಮನ ಸೆಳೆಯುವುದು ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಮುಖ ಗುರಿ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದರು. ಈ ನಿಟ್ಟಿನಲ್ಲಿ ‘ನಮ್ಮ ನಡಿಗೆ ದ್ವಾರಸಮುದ್ರ ಕೆರೆ ಕಡೆಗೆ‌’ ಎಂದು ಸ್ವಾಮೀಜಿಗಳು 3 ಕಿ.ಮೀ ಪಾದಯಾತ್ರೆ ಮಾಡಿದರು.

ADVERTISEMENT

ಬೆಳವಾಡಿಯ ಬಸವೇಶ್ವರ ಭಜನೆ ಸಂಘದವರು ತಾಳ, ದಮರಿ, ತಂಬೂರಿ ನುಡಿಸುತ್ತಾ ವಚನ ಗಾಯನದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಕಿಕ್ಕೇರಿಯ ನಿಂಗರಾಜು ತಂಡದ ಸ್ಯಾಕ್ಸೋಫೋನ್‌ ಹಾಗೂ ಡೊಳ್ಳು ವಾದನ ಮೆರವಣಿಗೆಗೆ ಮೆರುಗು ನೀಡಿತು.

ಕಳೆದ ವರ್ಷ ಹಳೇಬೀಡಿನಲ್ಲಿಯೇ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಬೇಕಾಗಿತ್ತು. ತೀವ್ರ ಬರಗಾಲ ಎದುರಾಗಿದ್ದರಿಂದ ದ್ವಾರಸಮುದ್ರ ಕೆರೆಗೆ ನೀರು ಬಂದ ನಂತರ ಹಳೇಬೀಡಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸುವುದಾಗಿ ಹೇಳಿ ಸಿರಿಗೆರೆಯಲ್ಲೇ ಸರಳವಾಗಿ ಸಮಾರಂಭ ನಡೆಸಿದ್ದರು. ಈ ವರ್ಷ ಸಮೃದ್ಧ ಮಳೆ ಸುರಿದಿದ್ದಲ್ಲದೆ, ಯಗಚಿ ಏತ ನೀರಾವರಿಯಿಂದಲೂ ನೀರು ಹರಿಸಿದ್ದರಿಂದ ಕೆರೆ ಭರ್ತಿಯಾಗಿದೆ. ಹೀಗಾಗಿ, ಈ ವರ್ಷ ಹಳೇಬೀಡಿನಲ್ಲಿ ಶ್ರೀಗಳು ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸುತ್ತಿದ್ದಾರೆ.

ಶಾಸಕ ಕೆ.ಎಸ್‌.ಲಿಂಗೇಶ್‌, ಮುಖಂಡರಾದ ಹುಲ್ಲಳ್ಳಿ ಸುರೇಶ್‌, ಕೊರಟಗೆರೆ ಪ್ರಕಾಶ್‌, ಎಚ್‌.ಆರ್‌.ಕಾಂತರಾಜು, ಡಾ.ವಿನಾಯಕ್‌, ಹೆಬ್ಬಾಳು ಭುವನೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.