ADVERTISEMENT

ಚಿಕ್ಕಮಗಳೂರು, ಕೊಡಗು ಬೆಳೆಗಾರರ ಸಮಸ್ಯೆ ಆಲಿಸಲು ಕ್ರಮ: ಸಚಿವ ಅಶೋಕ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 15:53 IST
Last Updated 27 ಏಪ್ರಿಲ್ 2022, 15:53 IST
 ಹಾಸನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರು ಭಾಗವಹಿಸಿದ್ದರು
 ಹಾಸನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರು ಭಾಗವಹಿಸಿದ್ದರು   

ಹಾಸನ: ದಶಕಗಳಿಂದ ಎದುರಿಸುತ್ತಿರುವ ಕಾಫಿ ಬೆಳೆಗಾರರ ಸಮಸ್ಯೆಗೆ ಶಾಶ್ವತಪರಿಹಾರ ಕಲ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ಭರವಸೆ ನೀಡಿದರು.

ನಗರದ ಹೊರವಲಯ ಎಚ್‍ಎಂಟಿ ಕಲ್ಯಾಣ ಮಂಟಪದಲ್ಲಿ ಬುಧವಾರಆಯೋಜಿಸಿದ್ದ ಕಾಫಿ ಬೆಳೆಗಾರರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಕಾಫಿ ಬೆಳೆಗಾರರು ಭೂ ಒತ್ತುವರಿದಾರರು, ಕಬಳಿಕೆದಾರರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಬಂದಿದ್ದಾರೆ. ಇದನ್ನು ಶಾಶ್ವತವಾಗಿ ಕಳಚಲು ತಿಂಗಳೊಳಗೆ ಮಸೂದೆ ಸಿದ್ಧಪಡಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

‘ಇನ್ನು ಮುಂದೆ ಬೆಳೆಗಾರರು ಯಾವುದೇ ಶಾಸಕರು, ಸಚಿವರ ಬಳಿ ಅರ್ಜಿಹಿಡಿದು ಹೋಗಬೇಕಿಲ್ಲ. ಬೆಳೆಗಾರರ ನೋವು ಅರ್ಥವಾಗಿದೆ. ಏಕಾಏಕಿತೀರ್ಮಾನ ಮಾಡಿದರೆ ವಿರೋಧ ವ್ಯಕ್ತವಾಗುತ್ತದೆ ಎಂಬ ಕಾರಣಕ್ಕೆ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಬೆಳೆಗಾರರ ಸಮಸ್ಯೆ ಆಲಿಸಲಾಗುತ್ತಿದೆ.ಒತ್ತುವರಿ ಭೂಮಿಯನ್ನು ಎಷ್ಟು ವರ್ಷ ಗುತ್ತಿಗೆ ನೀಡಬೇಕು, ಎಷ್ಟು ಎಕರೆಗೆಮಿತಿಗೊಳಿಸಬೇಕು ಎಂಬುದನ್ನು ತೀರ್ಮಾನಿಸಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಕಾಡಾನೆ ಉಪಟಳ ತಪ್ಪಿಸಲು ರೈಲ್ವೆ ಬ್ಯಾರಿಕೇಡ್‌ ನಿರ್ಮಾಣಕ್ಕೆ ₹40 ಕೋಟಿ ಬಿಡುಗಡೆ ಮಾಡಲಾಗುವುದು’ ಎಂದರು.

ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ‘ತಾತ, ಮುತ್ತಜ್ಜರ ಕಾಲದಿಂದಲೂ ಸರ್ಕಾರಿ ಜಮೀನು ಒತ್ತುವರಿ ಮಾಡಿ ಕಾಫಿ ಬೆಳೆಯುತ್ತಿದ್ದಾರೆ. ಕೇರಳ ಮಾದರಿಯಲ್ಲೇ ರಾಜ್ಯದಲ್ಲೂ ಕಾನೂನು ರೂಪಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ‘ಜಿಲ್ಲೆಯಿಂದ ಅನೇಕರು ಸಚಿವರು,ಮುಖ್ಯಮಂತ್ರಿ, ಪ್ರಧಾನಮಂತ್ರಿ ಆದರೂ ಕಾಫಿ ಬೆಳೆಗಾರರ ಸಮಸ್ಯೆಬಗೆಹರಿಸಲು ಮುಂದಾಗಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಒತ್ತುವರಿದಾರರನ್ನು ಕಳ್ಳರ ರೀತಿ ನೋಡಲು ಪ್ರಾರಂಭಿಸಿದ್ದರು. ಅಲ್ಲದೆ ಒತ್ತುವರಿ ಜಮೀನನ್ನು ಬೇರೆಯವರಿಗೆ ನೀಡಲು ಚಿಂತನೆ ನಡೆಸಿದ್ದರು. ಇದೀಗ ಅಶೋಕ್ ಅವರು ಉಳುವವನೇ ಭೂ ಒಡೆಯ ಎಂಬಂತೆ ಉಳುವವರಿಗೆ ಭೂಮಿ ನೀಡಲು ಮುಂದಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ.ಮೋಹನ್ ಕುಮಾರ್,ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಜಿಲ್ಲೆಯ ಕಾಫಿಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು.

‘ಸರ್ಕಾರಿ ಭೂಮಿ ಸಾಗುವಳಿದಾರರಿಗೆ ನ್ಯಾಯಾಲಯದಿಂದ ನೋಟಿಸ್ ಬಂದಿದ್ದು, ಬಂಧನಕ್ಕೆ ಒಳಪಡಿಸುವ ಎಚ್ಚರಿಕೆ ನೀಡಲಾಗಿದೆ. ಇದರಿಂದ ಸಣ್ಣ ಬೆಳೆಗಾರರು ಭಯಭೀತರಾಗಿದ್ದಾರೆ. ಆದ್ದರಿಂದ ಭೂಕಬಳಿಕೆ ನಿಷೇಧ ಕಾಯ್ದೆ 192/ಎಗೆ ತಿದ್ದುಪಡಿ ತರಬೇಕು’ ಎಂದು ಮನವಿ ಮಾಡಿದರು.

‘ಪಹಣಿಯಲ್ಲಿ ಬೆಳೆ ಕಾಲಂ ನಮೂದಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಸ್ವಾಧೀನದಲ್ಲಿರುವ ಕೃಷಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಬೇಕು’ ಎಂದು ಕೋರಿದರು.

ಕಾಫಿ ಬೆಳೆಗಾರರು ತಮ್ಮ ಸಮಸ್ಯೆಯನ್ನು ಸಚಿವರ ಮುಂದಿಟ್ಟು ಶಾಶ್ವತಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.