ADVERTISEMENT

‘ಸಾಮಾನ್ಯ ಸಭೆ ವಿಷಯ ಮತ್ತೆ ಚರ್ಚೆಗೆ ಅವಕಾಶ’

ನಗರಸಭೆ ವಿರುದ್ಧ ಡಿ.ಸಿ ನ್ಯಾಯಾಲಯಕ್ಕೆ ದೂರು; ಗಿರೀಶ್‌

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 16:04 IST
Last Updated 8 ಮಾರ್ಚ್ 2022, 16:04 IST
ಹಾಸನ ನಗರಸಭೆ ಜೆಡಿಎಸ್‌ ಸದಸ್ಯ ಗಿರೀಶ್‌ ಚನ್ನವೀರಪ್ಪ ಮಾತನಾಡಿದರು. ಮುಖಂಡ ಕಮಲ್‌ ಕುಮಾರ್, ಸದಸ್ಯರಾದ ಕ್ರಾಂತಿ, ಅಕ್ಬರ್ ಇದ್ದಾರೆ.
ಹಾಸನ ನಗರಸಭೆ ಜೆಡಿಎಸ್‌ ಸದಸ್ಯ ಗಿರೀಶ್‌ ಚನ್ನವೀರಪ್ಪ ಮಾತನಾಡಿದರು. ಮುಖಂಡ ಕಮಲ್‌ ಕುಮಾರ್, ಸದಸ್ಯರಾದ ಕ್ರಾಂತಿ, ಅಕ್ಬರ್ ಇದ್ದಾರೆ.   

ಹಾಸನ: ‘ಫೆ.28ರಂದು ನಡೆದ ನಗರಸಭೆ ಸಾಮಾನ್ಯ ಸಭೆ ವಿಷಯಗಳನ್ನು ಮತ್ತೆ ಚರ್ಚಿಸಿ ನಿಯಮಾನುಸಾರ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ’ ಎಂದು ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ ಹೇಳಿದರು.

ಸಾಮಾನ್ಯ ಸಭೆಯ ನಡಾವಳಿ ನಿರ್ಣಯಗಳನ್ನು ಸಭೆ ನಡೆದ 7 ದಿನದೊಳಗೆ ಕೊಡಬೇಕು ಎಂಬ ನಿಯಮವಿದ್ದರೂ ಅಧ್ಯಕ್ಷರು ಕಾನೂನು ಉಲ್ಲಂಘನೆ ಮಾಡಿದ್ದಾರೆ. 28 ರಂದು ನಡೆದ ಸಭೆ ಉರ್ಜಿತವಾಗಿಲ್ಲ. ಎಲ್ಲಾ ವಿಷಯ ರದ್ದುಗೊಳಿಸಿ, ಹೊಸದಾಗಿ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಗರಸಭೆಯಲ್ಲಿ ಜೆಡಿಎಸ್‌ಗೆ ಬಹುಮತ ಇದ್ದರೂ ಮೀಸಲಾತಿ ಆಧಾರದಮೇಲೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಮಾರ್ಚ್‌ 14ರಂದು ನಗರಸಭೆ ಬಜೆಟ್‌ ಬಗ್ಗೆ ಅಭಿಪ್ರಾಯ ಸಂಗ್ರಹಿಸಲುಸಾರ್ವಜನಿಕರ ಸಭೆ ಕರೆಯಲಾಗಿದೆ. ಸಭೆ ಬಳಿಕ ಸದಸ್ಯರ ಪ್ರತ್ಯೇಕ ಸಭೆ ಕರೆದು ಬಜೆಟ್ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು. ಇದರಿಂದ ತಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಪ್ರಸ್ತಾಪಿಸಲು ಅನುಕೂಲವಾಗಲಿದೆ’ ಎಂದರು.

‘ನಗರದ ಅಭಿವೃದ್ಧಿಗೆ ವಿರೋಧ ಇಲ್ಲ. ಆದರೆ ಏಕಪಕ್ಷೀಯವಾಗಿ, ಕಾನೂನು ಬಾಹಿರವಾಗಿ ನಿರ್ಣಯ ತೆಗೆದುಕೊಳ್ಳಬಾರದು. ಅಲ್ಲದೇ ಜೆಡಿಎಸ್‌ ಸದಸ್ಯರ ಒಪ್ಪಿಗೆ ಇಲ್ಲದೆಯೂ ಸ‌ರ್ವಾನುಮತದ ಅಂಗೀಕಾರ ಪಡೆಯಲಾಗಿದೆ ಎಂದು ನಡಾವಳಿ ಪುಸ್ತಕದಲ್ಲಿ ಬರೆದು ನಿಯಮ ಉಲ್ಲಂಘಿಸುವುದು ಬೇಡ’ ಎಂದರು.

ಸದಸ್ಯ ಕ್ರಾಂತಿ ಮಾತನಾಡಿ, ‘ನಗರಸಭೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಆಡಳಿತ ನಡೆಸಲು ಅಧ್ಯಕ್ಷರು ವಿಫಲರಾಗಿದ್ದಾರೆ. ಸಾಲಗಾಮೆ ರಸ್ತೆಯಲ್ಲಿ ನೂರಾರು ವರ್ಷಗಳಿಂದ ಗಾಳಿ, ನೆರಳು ನೀಡುತ್ತಿದ್ದ ದೊಡ್ಡ ಮರಗಳನ್ನೇ ಬುಡಸಮೇತ ಕತ್ತರಿಸಲಾಗಿದೆ. ಬಡವ ಅಥವಾ ರೈತ ಈ ರೀತಿ ಮರ ಕಡಿದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದರು. ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕೂಡಲೇ ಎಫ್‌ಐಆರ್‌ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡ ಕಮಲ್‌ ಕುಮಾರ್ ಮಾತನಾಡಿ, ‘ನಿರ್ಣಯಗಳನ್ನು ಕಾನೂನಾತ್ಮಕವಾಗಿ ಮಾಡಬೇಕು. ಸದಸ್ಯರನ್ನು ಕಡೆಗಣಿಸಿ ಮಾಡಿದರೆ ಮುಂದೆ ಅಧ್ಯಕ್ಷರೇ ಬಲಿ ಪಶು ಆಗಲಿದ್ದಾರೆ’ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಪ್ರಶಾಂತ್‌ ನಾಗರಾಜ್‌,ಮಂಜುನಾಥ್‌, ಅಕ್ಬರ್‌, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.