ಹಾಸನ: ಇಂದಿನ ಕಾಲದ ಮಗುವಿಗೆ ಹುಟ್ಟಿದಾಗಿನಿಂದಲೇ ಪ್ಲಾಸ್ಟಿಕ್ ಮಾಲಿನ್ಯದ ಎಸಳುಗಳು ತಾಗಿಕೊಳ್ಳುತ್ತಿವೆ ಎಂದು ಮಕ್ಕಳ ತಜ್ಞರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ದಿನೇಶ್ ಹೇಳಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ, ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರ, ವಿಪ್ರೊ ಫೌಂಡೇಶನ್, ಹಾಗೂ ಕರುಣಾ ಫೌಂಡೇಷನ್ ಸಹಯೋಗದಲ್ಲಿ ಹಾಸನದ ಶಿಶು ತಜ್ಞರ ಸಂಘದ ಭವನದಲ್ಲಿ ಖಾಸಗಿ ಶಾಲೆಗಳ ಇಕೋ ಕ್ಲಬ್ ನಿರ್ವಾಹಕರಿಗೆ ಆಯೋಜಿಸಿದ್ದ ಪರಿಸರ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಗು ಹುಟ್ಟಿದಾಗಲೇ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಹಾಸಿಗೆ-ಹೊದಿಕೆ ಹಾಗೂ ಡೈಪರ್ ರೂಪದಲ್ಲಿ ತೊಡಿಸುವ ಉಡುಗೆ ಮಗುವಿನ ಆರೋಗ್ಯಕ್ಕೂ ಒಳ್ಳೆಯದಲ್ಲ. ಪರಿಸರಕ್ಕೂ ಮಾರಕ ಎಂದು ವಿವರಿಸಿದ ಅವರು, ಪ್ಲಾಸ್ಟಿಕ್ ಡೈಪರ್‌ಗಿಂತ ಬಟ್ಟೆಯ ಡೈಪರ್ ಉತ್ತಮ ಎಂದರು.
ಬಿಜಿವಿಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಚಿನ್ನೇನಹಳ್ಳಿಸ್ವಾಮಿ ಮಾತನಾಡಿ, ‘ಪ್ರೌಢಶಾಲೆಗಳ ಇಕೋಕ್ಲಬ್‌ಗಳಿಗೆ ಸುಸ್ಥಿರ ಪರಿಸರ ಚಟುವಟಿಕೆ ನಡೆಸಲಾಗುತ್ತಿದೆ. ಜಿಲ್ಲೆಯ ಪರಿಸರವನ್ನು ಸಮಾಜಮುಖಿ ನೆಲೆಯಲ್ಲಿ ಮರುಸ್ಥಾಪಿಸಲು, ಪ್ಲಾಸ್ಟಿಕ್ ಕಸದಿಂದ ಪರಿಸರ ಇಟ್ಟಿಗೆ ನಿರ್ಮಾಣ, ಶಾಲಾ ಅಂಗಳದಲ್ಲಿ ಪೌಷ್ಟಿಕ ತೋಟ ಮತ್ತು ಬಾಲವಿಜ್ಞಾನಿ ಸಂಶೋಧನಾತ್ಮಕ ಚಟುವಟಿಕೆಗಳ ಮೂಲಕ ಪರಿಸರ ಸಾಕ್ಷರತೆಯನ್ನು ಬಿತ್ತುವ 6 ತಿಂಗಳ ಯೋಜನೆಯನ್ನು ನಾಲ್ಕು ಹಂತಗಳಲ್ಲಿ ರೂಪಿಸಿದೆ. ಅದರ ಭಾಗವಾಗಿ ಇಕೊ ಕ್ಲಬ್ ಸಂಚಾಲಕರಿಗೆ ತರಬೇತಿ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
ಮೊದಲದಿನ ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರದ ಸಮನ್ವಯಾಧಿಕಾರಿ ರವಿಶಂಕರ್, ನೀರಿನ ಬಳಕೆ-ಸಂರಕ್ಷಣೆ, ಮಾಲಿನ್ಯ, ಘನತ್ಯಾಜ್ಯಕ್ಕೆ ಪರಿಹಾರ, ಜೀವವೈವಿಧ್ಯ, ಆಹಾರ-ಆರೋಗ್ಯಗಳ ಕುರಿತು ಸಂಶೋಧನಾ ಚಟುವಟಿಕೆ ಹೇಗೆ ನಡೆಸಬೇಕು ಎಂಬುದನ್ನು ವಿವರಿಸಿದರು.
ಎರಡನೇ ದಿನದ ಚಟುವಟಿಕೆಯಲ್ಲಿ ತಾರಸಿ ಕೃಷಿ ಹಾಗೂ ಸಿಂಪಲ್ ಕಾಂಪೋಸ್ಟಿಂಗ್ ಕುರಿತು ತರಬೇತಿ ನೀಡಿದ ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಬಿಜಿವಿಎಸ್ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಚ್.ಜಿ.ಮಂಜುನಾಥ್, ಮನೆಯಂಗಳದಲ್ಲಿ ನಡೆಸುವ ಕೃಷಿ ಚಟುವಟಿಕೆ ಶಾಲೆ ಮತ್ತು ಮನೆಯಂಗಳದ ಪರಿಸರವನ್ನು ಅಂದಗೊಳಿಸುವ ಜೊತೆಗೆ ಖರ್ಚಿಲ್ಲದೆ ಮನೆಗೆ ಬೇಕಾಗುವಷ್ಟು ಪೌಷ್ಟಿಕ ತರಕಾರಿ ಬೆಳೆದುಕೊಳ್ಳಬಹುದು ಎಂದು ತಿಳಿಸಿದರು.
ಪರಿಸರ ಅರ್ಥ ಮಾಡಿಕೊಳ್ಳುವ ಬಗೆ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮಗಳ ಜೊತೆ ಬದುಕುವುದು ಹೇಗೆ ಎನ್ನುವ ಕುರಿತು ಬರಹಗಾರ ಕೆ.ಎಸ್.ರವಿಕುಮಾರ್, ಪ್ಲಾಸ್ಟಿಕ್ ನಿರ್ವಹಣೆ ಹಾಗೂ ಶಾಲಾ ಇಕೊ ಕ್ಲಬ್ ಕ್ರಿಯಾಯೋಜನೆ ಕುರಿತು ಬಿಜಿವಿಎಸ್ ಸದಸ್ಯ ಅಹಮದ್ ಹಗರೆ, ಮುಟ್ಟು ಮತ್ತು ಆರೋಗ್ಯ ಪರಿಸರದ ಕುರಿತು ವೈದ್ಯೆ ಡಾ. ಸಾವಿತ್ರಿ, ಪರಿಸರ ಹಾಡುಗಳ ಚಟುವಟಿಕೆ ಬಗ್ಗೆ ಬಿಜಿವಿಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಸಿ.ಸೌಭಾಗ್ಯ ತರಬೇತಿ ನೀಡಿದರು.
ಸಮತಾ ಜಿಲ್ಲಾ ಸಂಚಾಲಕಿ ಮಮತಾ ಶಿವು ಸಮಾರೋಪ ಭಾಷಣ ಮಾಡಿದರು.
‘ಬಿಜಿವಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಧರ್ಮರಾಜ್ ಸ್ವಾಗತಿಸಿದರು. ಹಾಸನ ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಲಾಕ್ಷಿ ನಿರೂಪಿಸಿ, ವಂದಿಸಿದರು.
ನಿರ್ವಾಹಕರಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಬಿಜಿವಿಎಸ್ ಪದಾಧಿಕಾರಿಗಳಾದ ಮೋನಿಕಾ, ಪ್ರಮೀಳಾ, ಹರೀಶ್, ಸುರೇಶ್, ಪುಷ್ಪ, ಪ್ರೀತಿ ತ್ಯಾಗಿ, ಮೈಮುನಾ, ಮಮತಾರಾಣಿ, ಕಮಲಮ್ಮ ವಿವಿಧ ಚಟುವಟಿಕೆ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.