ಹಾಸನ: ಒಂದು ಕಾಲದಲ್ಲಿ ರೈತರ ಕೈಹಿಡಿಯುವ ಆರ್ಥಿಕ ಬೆಳೆಯಾಗಿದ್ದ ಆಲೂಗಡ್ಡೆ ಬಿತ್ತನೆ ಕ್ಷೀಣಿಸುತ್ತಿದ್ದು, ಜಿಲ್ಲೆಯ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡುವಂತಾಗಿದೆ.
ಭಾರಿ ಇಳುವರಿಯಿಂದಾಗಿ 3 ದಶಕಗಳ ಹಿಂದೆ ಜಿಲ್ಲೆಯ ರೈತರು ಆಲೂಗಡ್ಡೆ ಬೆಳೆಯಲು ಪ್ರಾರಂಭಿಸಿದರು. ಆರಂಭದಲ್ಲಿ ಸುಮಾರು 60 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಬೆಳೆ ಈಗ, 3,500 ಹೆಕ್ಟೇರ್‌ಗೆ ಕುಸಿದಿದೆ. ಬೆಳೆಗೆ ಅತಿಯಾದ ರೋಗ ಉಲ್ಬಣಿಸಿದ್ದರಿಂದ 10 ವರ್ಷಗಳಿಂದ ಶೇ 90 ರಷ್ಟು ಬೆಳೆ ಕಡಿಮೆಯಾಗಿದ್ದು, ಸದ್ಯ ಬೆರಳೆಣಿಕೆಯಷ್ಟು ರೈತರು ಬೆಳೆಯುತ್ತಿದ್ದಾರೆ.
ಒಂದು ಎಕರೆಯಲ್ಲಿ ಆಲೂಗಡ್ಡೆ ಬೆಳೆಯಲು 5 ಕ್ವಿಂಟಲ್ ಬಿತ್ತನೆ ಬೀಜ ಬೇಕಾಗುತ್ತದೆ. ಉಳುಮೆ, ಬಿತ್ತನೆ, ರೋಗ ನಿರೋಧಕ ಔಷಧಿ, ಬೆಳೆಯನ್ನು ಹೊಲದಿಂದ ಕಿತ್ತು ಮಾರಾಟಕ್ಕೆ ಇಡುವವರೆಗೆ ಕನಿಷ್ಠ ₹ 75 ಸಾವಿರದಿಂದ ₹80 ಸಾವಿರ ಖರ್ಚಾಗುತ್ತದೆ.
‘ರೋಗ ಬರದೇ ಇದ್ದರೆ, ಎಕರೆಗೆ 35 ಕ್ವಿಂಟಲ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ವರ್ತಕರು ಕೆ.ಜಿ.ಗೆ ₹20 ರ ದರದಲ್ಲಿ ಖರೀದಿ ಮಾಡುತ್ತಿದ್ದು, ರೈತರಿಗೆ ₹ 70 ಸಾವಿರ ದೊರಕುತ್ತದೆ. ಅದೇ ಆಲೂಗಡ್ಡೆ ವರ್ತಕರಿಂದ ಗ್ರಾಹಕರಿಗೆ ಕೆ.ಜಿ.ಗೆ ₹ 30 ರಿಂದ ₹ 35 ರವರೆಗೆ ಮಾರಾಟ ಆಗುತ್ತದೆ’ ಎನ್ನುತ್ತಾರೆ ರೈತರು.
4 ಲಕ್ಷ ಚೀಲ ಬಿತ್ತನೆ ಬೀಜ ಆವಕ: ರಾಜ್ಯದಲ್ಲೇ ಅತಿ ಹೆಚ್ಚು ಆಲೂಗಡ್ಡೆ ಬೆಳೆಯುವ ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಹಾಸನ ಎಪಿಎಂಸಿಯಿಂದಲೇ ಆಲೂಗಡ್ಡೆ ಬಿತ್ತನೆ ಬೀಜ ಪೂರೈಕೆಯಾಗಲಿದೆ.
ಈಗಾಗಲೇ ವರ್ತಕರು ಪಂಜಾಬ್‌ನ ಜಲಂಧರ್‌ನಿಂದ ಕುಪ್ರಿಜ್ಯೋತಿ ಹಾಗೂ ಹಿಮಾಲಿನಿ ತಳಿ ಸೇರಿದಂತೆ ಒಟ್ಟು ನಾಲ್ಕು ಲಕ್ಷ ಚೀಲ ಬಿತ್ತನೆ ಆಲೂಗಡ್ಡೆ ತರಿಸಿದ್ದು, ಶೈತ್ಯಾಗಾರದಲ್ಲಿ ಸಂಗ್ರಹಿಸಿದ್ದಾರೆ. ಅದರಲ್ಲಿ ಒಂದು ಲಕ್ಷ ಚೀಲ ಬಿತ್ತನೆ ಆಲೂಗಡ್ಡೆ ಹೊರ ತೆಗೆದಿದ್ದು, ಈಗಾಗಲೇ 20 ಸಾವಿರ ಚೀಲದಷ್ಟು ಆಲೂಗಡ್ಡೆ ಮಾರಾಟ ಮಾಡಲಾಗಿದೆ.
8 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ: ಈ ಬಾರಿ ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆಯ ಗುರಿ ಹೊಂದಲಾಗಿದೆ.
2023ರಲ್ಲಿ ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಸೇರಿ ಒಟ್ಟು 6 ಲಕ್ಷ ಚೀಲ ಬಿತ್ತನೆ ಆಲೂಗಡ್ಡೆ ಬೀಜ ಮಾರಾಟವಾಗಿತ್ತು. 2024ರಲ್ಲಿ 4 ಲಕ್ಷ ಚೀಲ ಮಾರಾಟ ಮಾಡಲಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಗುರಿ ಹೊಂದಲಾಗಿದೆ.
‘ಜಿಲ್ಲೆಯಲ್ಲಿ ಮೇ ಕೊನೆಯ ವಾರದಿಂದ ಜೂನ್ ಅಂತ್ಯದವರೆಗೂ ಆಲೂ ಬಿತ್ತನೆ ಮಾಡಲಿದ್ದಾರೆ. ಹೀಗಾಗಿ 4 ಲಕ್ಷ ಚೀಲ ಬಿತ್ತನೆ ಆಲೂಗಡ್ಡೆ ತರಿಸಲಾಗಿದ್ದು, ಬೇಡಿಕೆ ಹೆಚ್ಚಾದರೆ ಹೆಚ್ಚಿನ ಬಿತ್ತನೆ ಆಲೂಗಡ್ಡೆ ತರಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತೇವೆ’ ಎನ್ನುತ್ತಾರೆ ವರ್ತಕ ಗೋಪಾಲ್.
ಆಲೂಗಡ್ಡೆಗೆ ಅಗತ್ಯವಿರುವ ಔಷಧಿ ಹಾಗೂ ಕ್ರಿಮಿನಾಶಕಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ. ಇದು ಅನುಮೋದನೆಯಾದರೆ ರೈತರಿಗೆ ಅನುಕೂಲವಾಗುತ್ತದೆ.ಮಂಗಳಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ
ಆಲೂಗಡ್ಡೆ ಬಿತ್ತನೆ (ಹೆಕ್ಟೇರ್‌ಗಳಲ್ಲಿ) ವರ್ಷ; ಬಿತ್ತನೆ
2019-20;9392
2020-21;8337
2021-22;10420
2022–23;3600
2023–24;3600
2024–25;8000
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.