
ಹಾಸನ: ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ವಿಸ್ತೀರ್ಣ ಹೆಚ್ಚಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ವತಿಯಿಂದ ಜ.26 ಹಾಗೂ 27ರಂದು ಆಲೂಗಡ್ಡೆ ಮೇಳವನ್ನು ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಹಾಸನಾಂಬ ಉದ್ಯಾನದಲ್ಲಿ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕ ಯೋಗೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲೂಗಡ್ಡೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಹಿಂದೆ ಜಿಲ್ಲೆಯಲ್ಲಿ 50ಸಾವಿರ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗುತ್ತಿದ್ದ ಆಲೂಗೆಡ್ಡೆ, ಹಲವು ಕಾರಣಗಳಿಂದ ಕ್ರಮೇಣ ಕುಸಿತ ಕಂಡಿದ್ದು, ಪ್ರಸ್ತುತ 7ಸಾವಿರ ಹೆಕ್ಟೇರ್‌ಗಳಿಗೆ ಸೀಮಿತವಾಗಿದೆ. ಈ ಹಿನ್ನೆಲೆ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆಲೂಗಡ್ಡೆಯ ಹೊಸ ತಳಿಗಳ ಪರಿಚಯ, ಸುಧಾರಿತ ಸಸ್ಯ ಸಂರಕ್ಷಣಾ ಔಷಧಿಗಳ ಬಳಕೆ, ವಿನೂತನ ತಂತ್ರಜ್ಞಾನ ಹಾಗೂ ಯಾಂತ್ರೀಕರಣದ ಬಗ್ಗೆ ಮಾಹಿತಿ ನೀಡಲಾಗುವುದು. ಜೊತೆಗೆ ರೈತರಿಗೆ ಆಲೂಗಡ್ಡೆ ಬೀಜೋತ್ಪಾದಕರು, ಕೃಷಿ ಯಂತ್ರೋಪಕರಣ ತಯಾರಕರು ಹಾಗೂ ಸಂಸ್ಕರಣಾ ಕಂಪನಿಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವುದು ಮೇಳದ ಪ್ರಮುಖ ಉದ್ದೇಶ ಎಂದರು.
ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು, ರೈತ ಉತ್ಪಾದಕ ಸಂಸ್ಥೆಗಳು, ನರ್ಸರಿದಾರರು, ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಪಂಜಾಬ, ಹರಿಯಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಂದ ಆಲೂಗಡ್ಡೆ ಬೀಜೋತ್ಪಾದಕರು ಹಾಗೂ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ಮತ್ತು ಖಾಸಗಿ ಕಂಪನಿಗಳು ಪಾಲ್ಗೊಳ್ಳಲಿದ್ದು, ಸುಮಾರು 60 ಮಳಿಗೆಗಳನ್ನು ತೋಟಗಾರಿಕೆ ಇಲಾಖೆ ತೆರೆಯಲಿದೆ ಎಂದು ವಿವರಿಸಿದರು.
ಈ ಮಳಿಗೆಗಳಲ್ಲಿ ಆಲೂಗಡ್ಡೆ ಬೀಜಗಳು, ಉತ್ಪಾದನಾ ತಾಂತ್ರಿಕತೆ ಹಾಗೂ ಯಂತ್ರೋಪಕರಣಗಳಿಗೆ ಸಂಬಂಧಿಸಿದ 25 ಮಳಿಗೆಗಳು, ಸಸ್ಯಸಂರಕ್ಷಣಾ ಔಷಧಿ ಮತ್ತು ರಸಗೊಬ್ಬರಗಳ 13 ಮಳಿಗೆಗಳು, ಯಾಂತ್ರೀಕರಣಕ್ಕೆ ಸಂಬಂಧಿಸಿದ 11 ಮಳಿಗೆಗಳು, ಸಂಸ್ಕರಣೆಗೆ 3, ಹನಿ ನೀರಾವರಿಗೆ 2 ಹಾಗೂ ಇತರೆ 6 ಮಳಿಗೆಗಳು ಇರಲಿವೆ. ಕೃಷಿ ಇಲಾಖೆಯ ಸಿರಿಧಾನ್ಯ ಮೇಳದ 24 ಮಳಿಗೆಗಳು ಸೇರಿ ಒಟ್ಟು 84 ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸಲಿದ್ದು, ಶಾಸಕ ಕೆ.ಎಂ. ಶಿವಲಿಂಗೇಗೌಡ ಪ್ರದರ್ಶನ ಮಳಿಗೆಗಳ ಉದ್ಘಾಟಿಸಲಿದ್ದಾರೆ. ಶಾಸಕ ಸ್ವರೂಪ್ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಶ್ರೇಯಸ್ ಪಟೇಲ್, ಯಂತ್ರೋಪಕರಣ ಮಳಿಗೆಗಳ ಉದ್ಘಾಟಿಸುವರು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮೇಳದಲ್ಲಿ ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಕೇಂದ್ರ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಇತರೆ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು, ರೈತರೊಂದಿಗೆ ಚರ್ಚಾಗೋಷ್ಠಿ ನಡೆಸಿ ತಾಂತ್ರಿಕ ಮಾಹಿತಿ ನೀಡಲಿದ್ದಾರೆ. ಜೊತೆಗೆ ರೈತರ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಸೂಚಿಸಲಿದ್ದಾರೆ. ಜಿಲ್ಲೆಯ 16 ಪ್ರಗತಿಪರ ಆಲೂಗಡ್ಡೆ ರೈತರನ್ನು ಸನ್ಮಾನಿಸಲಾಗುವುದು ಎಂದರು.
ಮೇಳದಲ್ಲಿ ಸುಮಾರು 15 ಸಾವಿರ ರೈತರು ಭಾಗವಹಿಸುವ ನಿರೀಕ್ಷೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಲೂಗಡ್ಡೆ ಬೆಳೆಗಾರರು, ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಸಂಬಂಧಿತ ಭಾಗೀದಾರರು ಪಾಲ್ಗೊಂಡು ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಯೋಗೇಶ್ ಮನವಿ ಮಾಡಿದರು.
ಎಡಿಎ ಪ್ರಕಾಶ್, ಸುಧಾಕರ್, ನಟರಾಜ್, ಮಂಜುನಾಥ್ ಶೆಟ್ಟಿ ಹಾಗೂ ಇತರರು ಇದ್ದರು.
ಸಿರಿಧಾನ್ಯ ಹಬ್ಬ
ವಾಣಿಜ್ಯ ಮೇಳ 26ರಂದು ಸಿರಿಧಾನ್ಯ ಉತ್ಪಾದನೆ ಮತ್ತು ಬಳಕೆ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯ ಹಬ್ಬ ವಾಣಿಜ್ಯ ಮೇಳವನ್ನು ಜ.26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯ ಹಾಸನಾಂಬ ಉದ್ಯಾನದಲ್ಲಿ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ ತಿಳಿಸಿದರು. ಫೆಬ್ರವರಿ 6ರಿಂದ 8ರವರೆಗೆ ಬೆಂಗಳೂರಿನಲ್ಲಿ ಅಂತರ ರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ-2026 ಆಯೋಜಿಸಲಾಗಿದ್ದು ಜಿಲ್ಲೆಯ ಜನರಿಗೆ ಸಿರಿಧಾನ್ಯಗಳ ಮಹತ್ವವನ್ನು ಪರಿಚಯಿಸುವುದು ಸಾವಯವ ಕೃಷಿಯತ್ತ ರೈತರನ್ನು ಉತ್ತೇಜಿಸುವುದು ಹಾಗೂ ಆರೋಗ್ಯಕರ ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಹಾಸನದಲ್ಲಿ ನಡೆಯುವ ಮೇಳದ ಪ್ರಮುಖ ಉದ್ದೇಶವಾಗಿದೆ ಎಂದರು. ಮೇಳದ ಭಾಗವಾಗಿ ಸಿರಿಧಾನ್ಯ ನಡಿಗೆ ಕೃಷಿ ತಜ್ಞರಿಂದ ಉಪನ್ಯಾಸಗಳು ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ತರಬೇತಿ ಕಾರ್ಯಾಗಾರ ಸಿರಿಧಾನ್ಯ ಆಧಾರಿತ ಆಹಾರ ಮೇಳ ಆರೋಗ್ಯ ತಪಾಸಣಾ ಶಿಬಿರ ಪೌಷ್ಟಿಕ ಆಹಾರದ ಕುರಿತು ಮಾಹಿತಿ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಈ ಮೇಳದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ರೈತರು ಮಹಿಳಾ ಸ್ವಸಹಾಯ ಸಂಘಗಳು ಕೃಷಿ ವಿಜ್ಞಾನಿಗಳು ವೈದ್ಯರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.