ADVERTISEMENT

ಆಲೂಗಡ್ಡೆ: ಪ್ರಾಯೋಗಿಕ ಅಂಗಾಂಶ ಕೃಷಿಗೆ ಸಿದ್ಧತೆ

ಅರಕಲಗೂಡು ತಾಲ್ಲೂಕಿನ 100 ಎಕರೆ ಪ್ರದೇಶದಲ್ಲಿ ಬೆಳೆ; ನರ್ಸರಿಗಳಲ್ಲಿ ಸಸಿ ಲಭ್ಯ

ಜಿ.ಚಂದ್ರಶೇಖರ್‌
Published 8 ಮೇ 2021, 4:59 IST
Last Updated 8 ಮೇ 2021, 4:59 IST
ಅಂಗಾಂಶ ಕೃಷಿ ವಿಧಾನದಲ್ಲಿ ಸಸಿ ನಾಟಿ ಮಾಡಿ ರೈತರ ಜಮೀನಿನಲ್ಲಿ ಕೃಷಿ ಮಾಡಿರುವ ಆಲೂಗಡ್ಡೆ ಬೆಳೆ
ಅಂಗಾಂಶ ಕೃಷಿ ವಿಧಾನದಲ್ಲಿ ಸಸಿ ನಾಟಿ ಮಾಡಿ ರೈತರ ಜಮೀನಿನಲ್ಲಿ ಕೃಷಿ ಮಾಡಿರುವ ಆಲೂಗಡ್ಡೆ ಬೆಳೆ   

ಅರಕಲಗೂಡು: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ 100 ಎಕರೆ ಪ್ರದೇಶದಲ್ಲಿ ಅಂಗಾಂಶ ಕೃಷಿ ಆಲೂಗಡ್ಡೆ ಬೆಳೆಸಲು ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸಿದೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬೆಳೆ ಕಳೆದ ಹಲವು ವರ್ಷಗಳಿಂದ ಅಂಗಮಾರಿ ಸೇರಿದಂತೆ ವಿವಿಧ ರೋಗ ಬಾಧೆಗೆ ತುತ್ತಾಗುತ್ತಿದೆ. ಕಳಪೆ ಬಿತ್ತನೆ ಬೀಜ, ಹವಾಮಾನ ವೈಪರೀತ್ಯ, ದರ ಕುಸಿತ ಮುಂತಾದ ಹಲವು ಸಮಸ್ಯೆಗಳು ಬೆಳೆಗಾರರನ್ನು ನಿರಂತರವಾಗಿ ಬಾಧಿಸುತಿರುವ ಕಾರಣ ಬಹಳಷ್ಟು ರೈತರು ಈ ಬೆಳೆಯಿಂದ ವಿಮುಖರಾದ ಕಾರಣ ಆಲೂ ಬೆಳೆ ಪ್ರದೇಶ ದಿನೇ ದಿನೇ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಲೂ ಬೆಳೆಯನ್ನು ಸುಸ್ಥಿರ ಸ್ಥಿತಿಗೆ ಮರಳಿ ತರುವ ಉದ್ದೇಶದಿಂದ ಕೃಷಿಕರಿಗೆ ನೆರವಾಗಲು ಜಿಲ್ಲೆಯ ಸೋಮನಹಳ್ಳಿ ಕಾವಲ್‌ನಲ್ಲಿರುವ ತೋಟಗಾರಿಕಾ ಸಂಶೋಧನಾ ಕೇಂದ್ರವು ಅಂಗಾಂಶ ಕೃಷಿ ಮೂಲಕ ಆಲೂಗಡ್ಡೆ ಸಸಿಗಳನ್ನು ರೂಪಿಸಿದೆ.

ಸಂಶೋಧನಾ ಕೇಂದ್ರ ಸಿದ್ಧಪಡಿಸಿರುವ ಅಂಗಾಂಶ ಕೃಷಿ ಸಸಿಗಳನ್ನು ನರ್ಸರಿಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸುವ ವ್ಯವಸ್ಥೆ ಮಾಡಿದ್ದು, ರೈತರು ನರ್ಸರಿಗಳಲ್ಲಿ ತಮಗೆ ಅಗತ್ಯವಿರುವಷ್ಟು ಸಸಿಗಳನ್ನು ಕೊಂಡು ಬೆಳೆ ಬೆಳೆಯಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ತಿಳಿಸಿದರು.

ADVERTISEMENT

ಕಳೆದ ವರ್ಷ ಹಿಂಗಾರು ಹಂಗಾಮಿ ನಲ್ಲಿ ತಾಲ್ಲೂಕಿನ ಶಾನುಭೋಗನಹಳ್ಳಿ, ನರಸಿನ ಕುಪ್ಪೆ, ಹೆತ್ತಗೌಡನಹಳ್ಳಿ, ಭೈಚನಹಳ್ಳಿ ಗ್ರಾಮಗಳ ಆಸಕ್ತ ರೈತರಿಗೆ ಸಸಿಗಳನ್ನು ನೀಡಿ ಪ್ರಾಯೋಗಿಕವಾಗಿ ಕೃಷಿ ನಡೆಸಲಾಗಿತ್ತು. ಇದು ತೃಪ್ತಿದಾಯಕ ಫಲಿತಾಂಶ ನೀಡಿದ್ದು ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಇದನ್ನು ಕೃಷಿ ಮಾಡಿ ರೈತರಿಗೆ ಪರಿಚಯಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ತಾಲ್ಲೂಕಿನ ಮೂರು ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸುವ ಸಿದ್ಧತೆ ನಡೆದಿದೆ ಎಂದರು.

ಅಂಗಾಂಶ ಕೃಷಿ ವಿಧಾನ ಗೆಡ್ಡೆ ಬಿತ್ತನೆ ಮಾಡಿ ಬೆಳೆಯುವ ವಿಧಾನಕ್ಕಿಂತ ಸುಲಭವಾಗಿದ್ದು, ರೈತರಿಗೆ ಲಾಭದಾಯಕವೂ ಆಗಿದೆ. ಗಡ್ಡೆ ನಾಟಿ ವಿಧಾನದಲ್ಲಿ ಸಸಿಗಳು ಹುಟ್ಟಲು 15 ದಿನ ಬೇಕು. ಈ ಸಮಯದಲ್ಲಿ ಹವಾಮಾನ ವೈಪರೀತ್ಯದಿಂದ ಮಳೆ ಕೈಕೊಟ್ಟು ಉಷ್ಣಾಂಶ ಹೆಚ್ಚಿದರೆ ಅಥವಾ ಮಳೆ ಹೆಚ್ಚಾಗಿ ಶೀತ ಹೆಚ್ಚಾದರೂ ಬಿತ್ತಿದ ಬೀಜ ಕೊಳೆಯುವ ಅಪಾಯವಿದೆ. ಅಂಗಾಂಶ ಕೃಷಿ ವಿಧಾನದಲ್ಲಿ ಸಸಿಗಳನ್ನು ನಾಟಿ ಮಾಡುವ ಕಾರಣ 15 ದಿನಗಳ ಅವಧಿ ಉಳಿತಾಯವಾಗುತ್ತದೆ. ಅಲ್ಲದೆ, ನಾಟಿ ಮಾಡಿದ ಸಸಿಗಳು ಹುಟ್ಟದಿದ್ದರೆ ಮರುನಾಟಿ ಮಾಡುವ ಅವಕಾಶವಿದ್ದು, ರೈತರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಅಂಗಾಂಶ ಕೃಷಿ ಪದ್ಧತಿ ವ್ಯಾಪಕವಾಗುವ ನಿರೀಕ್ಷೆ ಇದೆ. ಆಲೂ ಬೆಳೆಗಾರರ ಸಂಕಷ್ಟ ದೂರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.