ADVERTISEMENT

ಕ್ವಾಲಿಟಿ ಬಾರ್‌ ಪರವಾನಗಿ ರದ್ದುಪಡಿಸಿ

ಸಂಸದ ಪ್ರಜ್ವಲ್‌ ರೇವಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 11:22 IST
Last Updated 4 ಏಪ್ರಿಲ್ 2020, 11:22 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಹಾಸನ: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ನಗರದ ಕ್ವಾಲಿಟಿ ಬಾಲ್‌ ಪರವಾನಗಿಯನ್ನು ರದ್ದುಪಡಿಸಬೇಕು ಹಾಗೂ ಬಾರ್‌ ಮಾಲೀಕನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾರ್‌ ಮಾಲೀಕ ಹಾಸನ ಕ್ಷೇತ್ರದ ಶಾಸಕರ ಸ್ನೇಹಿತ ಅಥವಾ ಸಂಬಂಧಿಕ ಎನ್ನುವುದು ಬೇರೆ ವಿಚಾರ. ಜಿಲ್ಲೆಯ ಯಾವುದೇ ತಾಲ್ಲೂಕುಗಳಲ್ಲೂ ಇಂತಹ ಪ್ರಮಾದಗಳಿಗೆ ದಾರಿ ಮಾಡಿಕೊಡಬಾರದು ಎಂದರು.

’ಜಗತ್ತು ಕೊರೊನಾ ವೈರಸ್ ನಿಂದ ತೊಂದರೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ್ದಾರೆ. ಕ್ವಾಲಿಟಿ ಬಾರ್‌ನ ಮುಂದಿನ ಬಾಗಿಲಿಗೆ ಮುದ್ರೆ ಒತ್ತಿದ್ದು, ಹಿಂದಿನ ಬಾಗಿಲ ಮೂಲಕ ನಿತ್ಯ 5 ರಿಂದ 10 ವಾಹನಗಳಲ್ಲಿ ಮದ್ಯ ಸರಬರಾಜು ಆಗುತ್ತಿತ್ತು. ಗ್ರಾಮೀಣ ಭಾಗದ ಪೆಟ್ಟಿಗೆ ಅಂಗಡಿಗಳಿಗೆ ಇಲ್ಲಿಂದಲೇ ಮದ್ಯ ಪೂರೈಕೆಯಾಗಿದೆ. ಕ್ವಾಲಿಟಿ ಬಾರ್‌ ನ ಸ್ಟಾಕ್ ಲೀಸ್ಟ್ ಮತ್ತು ದಾಳಿಯಾದ ಸಂದರ್ಭದಲ್ಲಿ ಸ್ಟಾಕ್ ಪರಿಶೀಲಿಸಿದಾಗ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಬಾರ್‌ ಮಾಲೀಕ ಯಾರೇ ಆಗಿದ್ದರೂ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

’ಕೊರೊನಾ ಹಿನ್ನೆಲೆ ಜಿಲ್ಲಾಧಿಕಾರಿ ನಿತ್ಯ ಸಭೆಗಳನ್ನು ನಡೆಸುತ್ತಿದ್ದರೂ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಒಂದು ಬಾರಿಯೂ ಹಾಜರಾಗಿಲ್ಲ. ತಾಲ್ಲೂಕಿನ ಜನರ ಕಷ್ಟಕ್ಕೆ ಸ್ಪಂದಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ. ತನಗೂ ಕೊರಾನಾ ಸಮಸ್ಯೆಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಬಾರದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಳಕಳಿಯ ಪ್ರಾರ್ಥನೆಗೆ ಮನ್ನಣೆ ನೀಡಬೇಕಲ್ಲವೆ?’ ಎಂದು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

’ಈಗಾಗಲೇ ಆರು ತಾಲ್ಲೂಕುಗಳಿಗೂ ಭೇಟಿ ನೀಡಿದ್ದೇನೆ. ಕೊರೊನಾ ನಿಯಂತ್ರಣ ಕ್ರಮಕ್ಕಾಗಿ ಇನ್ನಷ್ಟು ಅನುದಾನ ನೀಡುವಂತೆ ಪ್ರಧಾನಿಗೆ ಪತ್ರ ಬರೆಯುತ್ತೇನೆ. ನಾವು ಕೂಡ ಸಾಧ್ಯವಾದಷ್ಟು ನೆರವಾಗುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.