ADVERTISEMENT

ಕೋವಿಡ್‌ ವ್ಯಾಕ್ಸಿನ್‌ ಸಂಗ್ರಹಕ್ಕೆ ಸಿದ್ಧತೆ

ಡಿಎಚ್‌ಒ ಕಚೇರಿಯಲ್ಲಿ ಪ್ರತ್ಯೇಕ ಲಸಿಕಾ ಕೊಠಡಿ: ಆರೋಗ್ಯ ಕಾರ್ಯಕರ್ತರ ಪಟ್ಟಿ ತಯಾರಿ

ಕೆ.ಎಸ್.ಸುನಿಲ್
Published 21 ನವೆಂಬರ್ 2020, 12:40 IST
Last Updated 21 ನವೆಂಬರ್ 2020, 12:40 IST
ಹಾಸನ ಜಿಲ್ಲಾ ಆರೋ‌ಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ನೆಲ ಮಹಡಿಯಲ್ಲಿ ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹಾಸನ ಜಿಲ್ಲಾ ಆರೋ‌ಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ನೆಲ ಮಹಡಿಯಲ್ಲಿ ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.   

ಹಾಸನ: ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಗಳನ್ನು ಸುರಕ್ಷಿತವಾಗಿ ಹಾಗೂ ವೈಜ್ಞಾನಿಕವಾಗಿ
ಸಂಗ್ರಹಿಸಿಡಲು ಜಿಲ್ಲಾ ಆರೋಗ್ಯ ಇಲಾಖೆ ಪ್ರತ್ಯೇಕ ಲಸಿಕಾ ಕೊಠಡಿಗಳನ್ನು ಸಿದ್ಧಗೊಳಿಸಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ನೆಲ ಮಹಡಿಯಲ್ಲಿ ಪ್ರತ್ಯೇಕ ಲಸಿಕಾ ಕೊಠಡಿ (ವಾಕ್‌ ಇನ್ ಕೂಲರ್‌, ವಾಕ್‌ ಇನ್‌ ಫ್ರೀಜರ್‌ ಇರುವಂಥ) ಸಿದ್ಧಪಡಿಸಲಾಗುತ್ತಿದೆ. ಸಂಪೂರ್ಣ ಹವಾ ನಿಯಂತ್ರಣದ ಮೂಲಕ ಲಸಿಕೆ ಸಂಗ್ರಹಿಸಿಡಲು ವ್ಯವಸ್ಥೆ ಮಾಡಲಾಗುತ್ತಿದೆ.

ಲಸಿಕೆಗಳನ್ನು ಲಸಿಕಾ ಸ್ಥಳಗಳಿಗೆ ಸಾಗಿಸುವಾಗ, ಸಂಗ್ರಹ ಕೊಠಡಿಯಲ್ಲಿ ಶೇಖರಿಸುವಾಗ 2 ರಿಂದ 8 ಡಿಗ್ರಿ ತಾಪಮಾನ ಕಾಯ್ದುಕೊಳ್ಳಬೇಕು. ತಾಪಮಾನ ಏರುಪೇರಾಗದಂತೆ ನಿಗಾ ವಹಿಸಲು ಜಿಲ್ಲಾದಾದ್ಯಂತ108 ಕೋಲ್ಡ್‌ ಚೈನ್‌ ಪಾಯಿಂಟ್ಸ್‌ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 25 ಸಾವಿರ ವ್ಯಾಕ್ಸಿನ್‌ಗೆ ಬೇಡಿಕೆ ಸಲ್ಲಿಸಲಾಗಿದೆ.

ADVERTISEMENT

‘ಕೋವಿಡ್‌ ಲಸಿಕೆಯನ್ನು ಕೋಲ್ಡ್‌ ಚೈನ್‌ ಪಾಯಿಂಟ್ಸ್‌ನಲ್ಲಿ ಸಂಗ್ರಹಿಸಿಡಬಹುದು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ
108 ಪಾಯಿಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಪಾಯಿಂಟ್‌ಗಳಲ್ಲಿ ಪೊಲಿಯೋ, ಬಿಸಿಜಿ, ದಡಾರ ಸೇರಿ ಒಂಬತ್ತು ಮಾರಕ ರೋಗಳ ಲಸಿಕೆ ಸಂಗ್ರಹಿಸಿಡಬಹುದು. ಇದೇ ಕೇಂದ್ರದಲ್ಲಿ ಕೋವಿಡ್‌ ಲಸಿಕೆ ಸಂಗ್ರಹಿಸಲು ತಯಾರಿ ಮಾಡಲಾಗಿದೆ’ ಎಂದು ಆರ್‌ಸಿಎಚ್‌ ಅಧಿಕಾರಿ ಡಾ.ಕಾಂತರಾಜು ತಿಳಿಸಿದರು.

‘ಒಂದು ಕೋಲ್ಡ್‌ ಚೈನ್‌ ಪಾಯಿಂಟ್‌ ನಾಲ್ಕು ಐಸ್‌ ಪ್ಯಾಕ್‌ಗಳನ್ನು ಹೊಂದಬಹುದಾಗಿದ್ದು, ಒಟ್ಟು 432 ಐಸ್‌ ಬ್ಯಾಕ್ಸ್‌ಗಳು ಲಭ್ಯವಿವೆ. 800 ವ್ಯಾಕ್ಸಿನ್‌ ಕ್ಯಾರಿಯರ್‌ಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾದಾದ್ಯಂತ ಡೀಪ್‌ ಫ್ರೀಜರ್ಸ್‌ ಮತ್ತು ಐಸ್‌ಲೈನ್‌ ರೆಫ್ರಿಜೆರೇಟರ್‌ ‌(ಐಎಲ್‌ಆರ್‌) ಉಪಕರಣಗಳು ಲಭ್ಯವಿದೆ. ಡೀಪ್‌ ಫ್ರೀಜರ್‌ಗಳಲ್ಲಿ ಐಸ್‌ ಪ್ಯಾಕ್‌ಗಳನ್ನು ತಯಾರಿಸಲಾಗುತ್ತದೆ. ಐಎಲ್‌ಆರ್‌ ಉಪಕರಣಗಳಲ್ಲಿ ಕೊರೊನಾ ಲಸಿಕೆ ಶೇಖರಿಸಿಡಲಾಗುತ್ತದೆ. ಎಲೆಕ್ಟ್ರಾನಿಕ್‌ ವ್ಯಾಕ್ಸಿನ್‌ ಇಂಟಲಿಜೆನ್ಸ್‌ ನೆಟ್‌ವರ್ಕ್‌ ಮೂಲಕ ಲಸಿಕೆಯನ್ನು 2 ರಿಂದ 8 ಡಿಗ್ರಿ ತಾಪಮಾನದಲ್ಲಿ ಸುರಕ್ಷಿತವಾಗಿಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ವಿವರಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತೆಯರಿಗೆ ಆದ್ಯತೆ ಮೇಲೆ
ಕೋವಿಡ್‌ 19 ನೀಡಲು ಯೋಜಿಸಿದೆ. ಹಾಗಾಗಿ ಆರೋಗ್ಯ ಕಾರ್ಯಕರ್ತರ ಪಟ್ಟಿ ತಯಾರಾಗುತ್ತಿದ್ದು, ತಾಲ್ಲೂಕು, ಸಮುದಾಯ, ಜಿಲ್ಲಾಸ್ಪತ್ರೆ ಸೇರಿ 161 ಕೇಂದ್ರಗಳಿಂದ 8546 ಸಿಬ್ಬಂದಿ ಗುರುತಿಸಲಾಗಿದೆ. ಈವರೆಗೆ ಎರಡು ಸಾವಿರಕ್ಕೂ ಅಧಿಕ ಸಿಬ್ಬಂದಿಯ ಮಾಹಿತಿ ಸಂಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.