ಹಾಸನ: ನ್ಯಾ.ನಾಗಮೋಹನ್ ದಾಸ್ ನೀಡಿರುವ ಒಳ ಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು, ಜಾರಿಗೂ ಮುನ್ನ ಸರ್ಕಾರ ಪುನರ್ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಸಂಬಂಧಿತ ಜಾತಿಗಳ ಒಕ್ಕೂಟದ ಸದಸ್ಯರು ನಗರದ ಅಂಬೇಡ್ಕರ್ ಪ್ರತಿಮೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಒಕ್ಕೂಟದ ಸದಸ್ಯ ಎಚ್.ಕೆ. ಸಂದೇಶ್ ಮಾತನಾಡಿ, ‘ನಾಗಮೋಹನ್ ದಾಸ್ ನೀಡಿರುವ ಒಳ ಮೀಸಲಾತಿ ವರದಿಯು ಅವೈಜ್ಞಾನಿಕವಾಗಿದೆ. ಇದರಿಂದ ಮೀಸಲಾತಿ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯ ಪಡೆಯಲು ತೊಂದರೆಯಾಗಲಿದೆ. ಸರ್ಕಾರ ವರದಿಯನ್ನು ಮರು ಪರಿಶೀಲನೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರ ಕೂಡಲೇ ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಿ, ನಂತರ ಒಳ ಮೀಸಲಾತಿ ವರದಿ ಜಾರಿ ಮಾಡಬೇಕು. ಈಗಾಗಲೇ ನೀಡಿರುವ ಒಳ ಮೀಸಲಾತಿಯಲ್ಲಿ ಹೊಲೆಯ ಬಲಗೈ ಜಾತಿಗೆ ಸೇರಿದ ವಿವಿಧ ಉಪ ಜಾತಿಗಳ ದತ್ತಾಂಶವನ್ನೂ ಒಟ್ಟುಗೂಡಿಸಿ ಸರ್ಕಾರ ಒಳ ಮೀಸಲಾತಿ ವರದಿ ಜಾರಿ ಮಾಡಬೇಕು. ಹೊಲೆಯ ಮತ್ತು ಇತರೆ ಜಾತಿಗಳ ಒಕ್ಕೂಟದಿಂದ ಈ ಕುರಿತು ಮನವಿ ಮಾಡುತ್ತಿದ್ದೇವೆ’ ಎಂದರು.
ಕೃಷ್ಣಕುಮಾರ್, ಸೋಮಶೇಖರ್, ಆರ್‌ಪಿಐ ಸತೀಶ್, ಬಿ.ಸಿ. ರಾಜೇಶ್, ಮಲ್ಲಿಗೆವಾಳು ದೇವಪ್ಪ, ರಾಜಶೇಖರ್, ಎಚ್.ಆರ್. ಕೊಮಾರಯ್ಯ, ನಾಗರಾಜ್ ಹೆತ್ತೂರ, ಹೊಂಗೆರೆ ದೇವರಾಜು, ಜಗದೀಶ್ ಚೌಡಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಸರ್ಕಾರ ಕೂಡಲೇ ನಮ್ಮ ಮನವಿ ಪುರಸ್ಕರಿಸಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಒಕ್ಕೂಟದ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ.– ಎಚ್.ಕೆ. ಸಂದೇಶ್, ಒಕ್ಕೂಟದ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.