ADVERTISEMENT

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 17:31 IST
Last Updated 14 ಜೂನ್ 2021, 17:31 IST
ತೈಲ ಬೆಲೆ ಏರಿಕೆ ಖಂಡಿಸಿ ಹಾಸನ ತಾಲ್ಲೂಕಿನ ಶಾಂತಿ ಗ್ರಾಮದಲ್ಲಿ ಹಿರಿಯ ಮುಖಂಡ ಬಾಗೂರು ಮಂಜೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತೈಲ ಬೆಲೆ ಏರಿಕೆ ಖಂಡಿಸಿ ಹಾಸನ ತಾಲ್ಲೂಕಿನ ಶಾಂತಿ ಗ್ರಾಮದಲ್ಲಿ ಹಿರಿಯ ಮುಖಂಡ ಬಾಗೂರು ಮಂಜೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.   

ಹಾಸನ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹಿರಿಯ ಮುಖಂಡ ಬಾಗೂರು ‌ಮಂಜೇಗೌಡ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧೆಡೆ ಸೋಮವಾರ ಪ್ರತಿಭಟನೆ ನಡೆಸಿದರು.

ಶಾಂತಿಗ್ರಾಮ, ದುದ್ದ, ಹೆರಗು, ಅಗ್ರಹಾರ ಗೇಟ್, ‌ಮೊಸಳೆ ಹೊಸಹಳ್ಳಿ, ದುದ್ದ, ಉದಯಪುರ ಬಳಿಯ ಪೆಟ್ರೋಲ್ ಬಂಕ್ ಮುಂಭಾಗ ಪ್ರತಿಭಟನೆ ನಡೆಸಿ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾಗೂರು ‌ಮಂಜೇಗೌಡ ಮಾತನಾಡಿ, ಇಂಧನ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ‌ಜನಸಮಾನ್ಯರಿಗೆ ಹೊರೆಯಾಗಿದ್ದು, ಕೂಡಲೇ ದರವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಜನಸಾಮಾನ್ಯರ ‌ಮೇಲೆ ಕಾಳಜಿ ಇಲ್ಲವಾಗಿದೆ. ಪ್ರಸ್ತುತ ದಿನಗಳಲ್ಲಿ ಇಂಧನ, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳು ‌ಬಡವರ ಕೈಗೆಟುಕದಂತಾಗಿದೆ. ಇದರಿಂದ ಜನರ ಬದುಕು ದುಸ್ತರವಾಗಿದೆ. ಕೋವಿಡ್‌ ದುರಿತ ಕಾಲದಲ್ಲಿ ಸರ್ಕಾರ ಜನರ ಆರೋಗ್ಯ ರಕ್ಷಣೆ ಜೊತೆಗೆ ಜೀವನವನ್ನು ಕಟ್ಟುವ ಕೆಲಸ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ವಾಸುದೇವ್, ದುದ್ದ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಕೆಪಿಸಿಸಿ ಸದಸ್ಯರಾದ ಗಣೇಶ್‌,‌ ಚೇತನ್ ಇದ್ದರು.

ವಕೀಲ ದೇವರಾಜೇಗೌಡ ನೇತೃತ್ವದಲ್ಲಿ ಕಟ್ಟಾಯ ಗ್ರಾಮದ ಪೆಟ್ರೋಲ್‌ ಬಂಕ್‌ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದೇವರಾಜೇಗೌಡ ಮಾತನಾಡಿ, ಕೊರೊನಾ ಸಂಕಷ್ಟದ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಎಲ್‌ಪಿಜಿ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಬಡವ ಹೊಟ್ಟೆ ಮೇಲೆ ಹೊಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಮಲ್ಲಿಗೆವಾಳು ದೇವಪ್ಪ, ಗಿರೀಶ್‌, ಲೋಹಿತ್, ಗೋಪಾಲ್‌, ಕಲ್ಲಳ್ಳಿ ಹರೀಶ್‌, ಗೊರೂರು ನಾಗರಾಜು, ಗೊಳ್ಳೇನಹಳ್ಳಿ ಸುನಿಲ್‌, ಹರೀಶ್‌, ನಾಗರಾಜು , ರಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.