ಬೇಲೂರು: ಬೇಲೂರು– ಹಾಸನ ರಸ್ತೆಯ ರಾಯಪುರದಲ್ಲಿ ಅಪಘಾತದಲ್ಲಿ ಮೃತಪಟ್ಟ ಶಿವಣ್ಣ (50) ಎಂಬುವರ ಶವವನ್ನು ರಸ್ತೆಗೆ ಅಡ್ಡಲಾಗಿಟ್ಟು ಗ್ರಾಮಸ್ಥರು ಶುಕ್ರವಾರ ಪ್ರತಿಭಟಿಸಿದರು.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ರಸ್ತೆ ದಾಟುತ್ತಿದ್ದ ಶಿವಣ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶಿವಣ್ಣ ಅವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಶವವನ್ನು ರಸ್ತೆಯಲ್ಲಿ ಇಟ್ಟು ಒಂದು ಗಂಟೆ ಪ್ರತಿಭಟಿಸಿದರು. ಇದರಿಂದ ರಸ್ತೆಯಲ್ಲಿ 2 ಕಿ.ಮೀ ದೂರದವರೆಗೆ ವಾಹನಗಳು ನಿಂತಿದ್ದವು.
ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಎಂ.ಯೋಗೀಶ್, ಪಿಎಸ್ಐ ಶಿವನಗೌಡ ಪಾಟೀಲ ಪ್ರತಿಭಟನಕಾರರನ್ನು ಮನವೋಲಿಸಿದರು.
ಗ್ರಾಮಸ್ಥರಾದ ಅಪ್ಪಣ್ಣ, ರವಿ ಮಾತನಾಡಿ, ‘ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ರಸ್ತೆಗೆ ಉಬ್ಬು ಹಾಕಬೇಕೆಂದು. ಮೃತರ ಕುಟುಂಬದವರಿಗೆ ₹25 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.