ADVERTISEMENT

ಅನುದಾನ ಹಂಚಿಕೆ ತಾರತಮ್ಯ: ಸದಸ್ಯರ ಅಹೋರಾತ್ರಿ ಧರಣಿ

ಅನುದಾನ ಹಂಚಿಕೆ ತಾರತಮ್ಯ: ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 17:22 IST
Last Updated 18 ಜನವರಿ 2022, 17:22 IST
ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿಯ ಮುಂಭಾಗ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಮಂಗಳವಾರ ಅಹೋರಾತ್ರಿ ಧರಣಿಯನ್ನು ಬಿ.ಸಿ ರಾಮಕೃಷ್ಣೇಗೌಡ, ಅಶೋಕ್‌ ನೇತೃತ್ವದಲ್ಲಿ ನಡೆಯಿತು
ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿಯ ಮುಂಭಾಗ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಮಂಗಳವಾರ ಅಹೋರಾತ್ರಿ ಧರಣಿಯನ್ನು ಬಿ.ಸಿ ರಾಮಕೃಷ್ಣೇಗೌಡ, ಅಶೋಕ್‌ ನೇತೃತ್ವದಲ್ಲಿ ನಡೆಯಿತು   

ಶ್ರವಣಬೆಳಗೊಳ: ಹೋಬಳಿಯ ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯ ಜಾರಿಯಲ್ಲಿ ಅಧ್ಯಕ್ಷ ಮತ್ತು ಪಿಡಿಒ ಶಾಮೀಲಾಗಿದ್ದಾರೆಂದು ಆರೋಪಿಸಿದ ಹಲವು ಸದಸ್ಯರು, ಅನುದಾನ ಹಂಚಿಕೆಯಲ್ಲಿ ಸಂಪೂರ್ಣ ತಾರತಮ್ಯವಾಗಿದ್ದು ಕೂಡಲೇ ಅದನ್ನು ರದ್ದುಪಡಿಸುವಂತೆ ಆಗ್ರಹಿಸಿದ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದ್ದು, ಬುಧವಾರವೂ ಮುಂದುವರಿದಿದೆ.

11 ಸದಸ್ಯರ ಜೆಡಿಎಸ್‌ ಬೆಂಬಲಿತರ ವಿರುದ್ಧ 9 ಜನ ಕಾಂಗ್ರೆಸ್‌ ಬೆಂಬಲಿತ ಸದಸ್ಯರು 2021–22ನೇ ಸಾಲಿನ ಕ್ರಿಯಾ ಯೋಜನೆಯನ್ನು ರದ್ದು ಮಾಡಿ ಪುನಃ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುದಾನ ಹಂಚಿಕೆಯನ್ನು ಸರಿಪಡಿಸಲು ಒತ್ತಾಯಿಸಿದ್ದಾರೆ.

ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ಸಿ.ರಾಮಕೃಷ್ಣೇಗೌಡ ಮಾತನಾಡಿ, ‘ಸಾರ್ವಜನಿಕರ ತೆರಿಗೆಯ ₹ 40 ಲಕ್ಷಕ್ಕೂ ಅಧಿಕ ಹಣವನ್ನು ಭ್ರಷ್ಟ ಪಿಡಿಒ ದೇವರಾಜೇಗೌಡ ಲೂಟಿ ಮಾಡಿದ್ದಾರೆ. ಅವರ ಸೇವಾ ಅವಧಿಯಲ್ಲಿ ಸದಸ್ಯರ ಬಗ್ಗೆ ಅಸಡ್ಡೆಯಿಂದ ನಡೆದುಕೊಳ್ಳುತ್ತಾರೆ’ ಎಂದು ಅವರನ್ನು ದೂರಿದರು.

ADVERTISEMENT

ಸದಸ್ಯರಾದದ ಶಶಿಕಲಾ ಪವಿತ್ರಾ, ಲತಾ ಮಾತನಾಡಿ, ‘ಪಿಡಿಒ ದೇವರಾಜೇಗೌಡ ಸಾಮಾನ್ಯ ಸಭೆಗೆ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ ಪ್ರಶ್ನೆ ಮಾಡಿದರೆ ಸಹಿ ಹಾಕಿದ್ದೀರಿ ಸಭೆಯಲ್ಲಿ ನಿರ್ಣಯ ಪಾಸಾಗಿದೆ ಎಂದು ಮಹಿಳಾ ಸದಸ್ಯರನ್ನು ಕತ್ತಲೆಯಲ್ಲಿ ಇಟ್ಟು ಮೋಸವೆಸುಗುತ್ತಾ ಬಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಹೋರಾತ್ರಿ ಧರಣಿಯನ್ನು ಕೈ ಬಿಡುವಂತೆ ತಾಲ್ಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೀಣಾ ಅವರು ಹಲವು ಬಾರಿ ಸದಸ್ಯರಿಗೆ ಮನವಿ ಮಾಡಿದರೂ ಸ್ಪಂದಿಸದೇ ಜಿಲ್ಲಾ ಪಂಚಾಯಿತಿ ಸಿಇಒ ಸ್ಥಳಕ್ಕೆ ಬರುವ ತನಕ ಹೋರಾಟ ನಡೆಸುತ್ತೇವೆ ಎಂದು ಪಿಡಿಒ ವಿರುದ್ಧ ಧಿಕ್ಕಾರ ಕೂಗಿದರು.

ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಬೇಡಿ ಪಂಚಾಯಿತಿ ಬಾಗಿಲಿಗೆ ಹಾಕಿರುವ ಬೀಗವನ್ನು ತೆರವುಗೊಳಿಸಿ ಎಂದು ವೀಣಾ ಎಸ್‌.ಐ, ಅಧ್ಯಕ್ಷ ಪಿ.ಬಿ.ನಿಖಿಲ್‌ಗೌಡ ಪರಿ ಪರಿಯಾಗಿ ಕೇಳಿದರೂ ಧರಣಿ ನಿರತ ಸದಸ್ಯರು ಅನ್ಯಾಯದ ಬಗ್ಗೆ ಮೊದಲು ನ್ಯಾಯ ಒದಗಿಸಿ ಎಂದು ಕೇಳಿದರು.

‘ನಿಧಿ 2ರ ಮೀಸಲಾತಿ ಕಂದಾಯ ಹಣದ ಬಳಕೆಯ ಬಗ್ಗೆ ಲೆಕ್ಕ ಕೊಡಬೇಕು ಎಂದು ಒಕ್ಕೊರಲಿನಿಂದ ಸದಸ್ಯರು ಒತ್ತಾಯಿಸಿದರು. ಹಾಗೆಯೇ ಪಿಡಿಒ ಬಗ್ಗೆ ಕ್ರಮ ಜರುಗಿಸುವ ಬಗ್ಗೆ ಹಾಗೂ ಕ್ರಿಯಾ ಯೋಜನೆಯನ್ನು ಮತ್ತೆ ಚರ್ಚೆಗೆ ತಂದು ಅನುಮತಿ ಪಡೆಯಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ, ನಾಗರಾಜು, ಜಯಕುಮಾರ, ಗೌರಮ್ಮ, ಪಾರ್ವತಮ್ಮ, ಎಡಿಒ ವೀಣಾ, ಪಿಡಿಒ ರಾಧಾ, ಎಸ್‌ಐ ಶ್ರೀನಿವಾಸ್‌, ಸ್ವಾಮಿ, ಅಧ್ಯಕ್ಷ ಉಪಾಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.