ADVERTISEMENT

ಆದಿವಾಸಿ, ಅಲೆಮಾರಿಗಳಿಗೆ ಸೌಕರ್ಯ ನೀಡಿ; ಮರಿಜೋಸೆಫ್‌

ವಿಳಂಬವಾದರೆ ಡಿ.ಸಿ ಕಚೇರಿ ಎದುರು ಪ್ರತಿಭಟನೆ; ಮರಿಜೋಸೆಫ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 3:50 IST
Last Updated 4 ಆಗಸ್ಟ್ 2021, 3:50 IST
ಮರಿಜೋಸೆಫ್‌
ಮರಿಜೋಸೆಫ್‌   

ಹಾಸನ: ‘ಜಿಲ್ಲೆಯಲ್ಲಿ ವಾಸಿಸುತ್ತಿರುವ ಆದಿವಾಸಿ ಹಾಗೂ ಅಲೆಮಾರಿ ಸಮುದಾಯಗಳಿಗೆ ಒಂದು ತಿಂಗಳೊಳಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ‌ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುವುದು’ ಎಂದು ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಚಾಲಕ ಮರಿಜೋಸೆಫ್ ಎಚ್ಚರಿಕೆ ನೀಡಿದರು.

‘ಜಿಲ್ಲೆಯಲ್ಲಿ ಹಸಲರು, ಹಕ್ಕಿಪಿಕ್ಕಿ, ಮಲೆಕುಡಿಯ, ಸೋಲಿಗ ಹಾಗೂ ಶಿಳ್ಳೆಕ್ಯಾತ ಮೀನುಗಾರರಿಗೆ ಹಾಗೂ ಟೆಂಟ್ ಟಾರ್ಪಲ್‌ಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸರ್ಕಾರದ ಸೌಲಭ್ಯ ದೊರಕಿಸಿ ಕೊಡುವುದರಲ್ಲಿಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಜಿಲ್ಲೆಯ ಅಂಗಡಿಹಳ್ಳಿಯಲ್ಲಿ ವಾಸಿಸುತ್ತಿರುವ ಹಕ್ಕಿಪಿಕ್ಕಿ ಜನಾಂಗ, ಹಸಲರು ಮತ್ತು ಅಲೆಮಾರಿ ಬುಡಕಟ್ಟು ಮತ್ತು ಹೇಮಾವತಿ ಜಲಾಶಯದ ಹತ್ತಿರ ಮೀನು ಹಿಡಿದು ಜೀವನ ಸಾಗಿಸುತ್ತಿರುವ ಕುಟುಂಬಗಳು 94ಸಿ ಅಡಿ ಅರ್ಜಿ ಸಲ್ಲಿಸಿದರೂ ವಸತಿ, ನಿವೇಶನ ನೀಡದೆ ಮೀನಾ– ಮೇಷ ಎಣಿಸುತ್ತಿದೆ’ ಎಂದು ದೂರಿದರು.

ADVERTISEMENT

‘ಆದಿವಾಸಿ ಬಿರ್ಸಾ ಮುಂಡಾ ಯುವ ಸೇನೆ ರಾಜ್ಯ ಸಂಚಾಲಕ ನವೀನ್ ಸದಾ ಮಾತನಾಡಿ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ವಿತರಿಸುತ್ತಿರುವ ಪೌಷ್ಟಿಕ ಆಹಾರವನ್ನು ಹಾಸನ ಜಿಲ್ಲೆಯ ಆದಿವಾಸಿ ಬಡಕುಟುಂಬಗಳಿಗೆ ನೀಡದೆ ವಂಚಿಸುತ್ತಿದ್ದಾರೆ. ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ಇದರ ಬಗ್ಗೆ ಗಮನಹರಿಸಿ ಜಿಲ್ಲೆಯ ಆದಿವಾಸಿಗಳಿಗೆ ವಿಶೇಷ ಯೋಜನೆಯಡಿ ನೀಡುತ್ತಿರುವಪೌಷ್ಟಿಕ ಆಹಾರವನ್ನು ನೀಡಬೇಕು’ ಎಂದು ಒತ್ತಾಯಿಸಿದರು.

‘ಹಸಲರು ಮತ್ತು ಹಕ್ಕಿಪಿಕ್ಕಿ ಸಮುದಾಯದ ಪ್ರತಿ ಕುಟುಂಬಗಳಿಗೆ ಜೀವನೋಪಾಯಕ್ಕೆ ಸಿ ಮತ್ತು ಡಿ ವರ್ಗದ 2 ಎಕರೆ ಸರ್ಕಾರಿ ಭೂಮಿಯನ್ನು ನೀಡಬೇಕು. ಸಕಲೇಶಪುರ ತಾಲ್ಲೂಕಿನಲ್ಲಿವಾಸಿಸುವ ಆದಿವಾಸಿ ಹಸಲರು ಸಮುದಾಯಗಳಿಗೆ ತನ್ನ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಹಾಗೂ ಕರ ಕುಶಲ, ಕೌಶಲ ತರಬೇತಿ ಕೇಂದ್ರ ನಿರ್ಮಿಸಲು ಮತ್ತು ನಾಟಿ ಔಷಧಿ ತಯಾರಿಕೆಯ ಗಿಡಮೂಲಿಕೆ ಬೆಳೆಸಲು ಕನಿಷ್ಠ 10 ಎಕರೆ ಭೂಮಿಯನ್ನು ಜಿಲ್ಲಾಡಳಿತ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್‌ಪಿಐ ಸತೀಶ್, ಹಕ್ಕಿಪಿಕ್ಕಿ ಸಮುದಾಯದ ಅಧ್ಯಕ್ಷ ಹೂರಾಜ್, ಅಲೆಮಾರಿ ಮೀನುಗಾರ ಸಮುದಾಯದ ಅಧ್ಯಕ್ಷ ಚಾಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.