ADVERTISEMENT

ಮಳೆ: ಜನ ಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:54 IST
Last Updated 7 ಜುಲೈ 2022, 4:54 IST
ಸಕಲೇಶಪುರದಲ್ಲಿ ಮುಂಜಾನೆ ಮುಂಗಾರು ಮಳೆಯಲ್ಲಿ ರೈನ್‌ಕೋಟ್‌ ತೊಟ್ಟು ಮನೆ ಮನೆಗೆ ದಿನ ಪತ್ರಿಕೆ ವಿತರಣೆ ಮಾಡುತ್ತಿರುವುದು
ಸಕಲೇಶಪುರದಲ್ಲಿ ಮುಂಜಾನೆ ಮುಂಗಾರು ಮಳೆಯಲ್ಲಿ ರೈನ್‌ಕೋಟ್‌ ತೊಟ್ಟು ಮನೆ ಮನೆಗೆ ದಿನ ಪತ್ರಿಕೆ ವಿತರಣೆ ಮಾಡುತ್ತಿರುವುದು   

ಸಕಲೇಶಪುರ: ತಾಲ್ಲೂಕಿನಾಧ್ಯಂತ ಬುಧವಾರ ಇಡೀ ದಿನ ಕೆಲವೊಮ್ಮೆ ಜೋರು ಸಹಿತ ಸೋನೆ ಮಳೆ ಸುರಿಯಿತು.

ಕಾರ್ಮೋಡ ಕವಿದು ಬೆಳಿಗ್ಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ಮಕ್ಕಳು ಶಾಲೆಗೆ ಬಂದು ಹೋಗಲು ಸಮಸ್ಯೆ ಉಂಟಾಗುವುದನ್ನು ಅರಿತು ಬಾಗೆ ಜೆಎಸ್ಎಸ್‌ ಪಬ್ಲಿಕ್ ಶಾಲೆ ಸೇರಿದಂತೆ ಕೆಲವು ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿದ್ದರು. ಗ್ರಾಮೀಣ ಪ್ರದೇಶದ ಹೆಚ್ಚಿನ ಮಕ್ಕಳು ಶಾಲಾ ಕಾಲೇಜುಗಳಿಗೆ ಗೈರು ಹಾಜರಾಗಿದ್ದರು, ಮಧ್ಯಾಹ್ನದ ನಂತರ ಮಳೆ ಹೆಚ್ಚು ಸುರಿಯುತ್ತಲೇ ಇತ್ತು. ಚರಂಡಿಗಳೆಲ್ಲಾ ತುಂಬಿ, ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿತ್ತು. ವೇಗವಾಗಿ ಸಂಚರಿಸುವ ವಾಹನಗಳಿಂದಾಗಿ ರಸ್ತೆ ಬದಿಯ ಪಾದಚಾರಿಗಳಿಗೆ ನೀರು ಹಾರಿ ವಾಹನ ಚಾಲಕರಿಗೆ ಶಾಪ ಹಾಕುತ್ತಿದ್ದದ್ದು ಕಂಡು ಬಂತು.

ಗುಂಡಿ ಬಿದ್ದು ಸಂಪೂರ್ಣ ಹಾಳಾಗಿರುವ ಬಾಳ್ಳುಪೇಟೆ–ಸಕಲೇಶಪುರ–ಮಾರನಹಳ್ಳಿ ನಡುವಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥದಲ್ಲಿ ಹೊಳೆಯಂತೆ ನೀರು ನಿಂದು ರಸ್ತೆ ಮತ್ತು ಗುಂಡಿ ಗೊತ್ತಾಗದೆ ವಾಹನಗಳ ಸಂಚಾರಕ್ಕೆ ಭಾರೀ ಸಮಸ್ಯೆ ಉಂಟಾಗಿರುವುದು ಕಂಡು ಬಂತು.

ADVERTISEMENT

ಪಶ್ಚಿಮಘಟ್ಟದ ಅಂಚಿನಲ್ಲಿರುವ ದೇವಾಲದಕೆರೆ, ಕುಮಾರಳ್ಳಿ, ಕಾಡಮನೆ, ಮಾರನಹಳ್ಳಿ, ಹೊಂಗಡಹಳ್ಳ, ಅತ್ತಿಹಳ್ಳಿ, ಬಿಸಿಲೆ ಸೇರಿದಂತೆ ಹಾನುಬಾಳು ಹಾಗೂ ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆ ವರೆಗೆ ಸರಾಸರಿ 122 ಮಿ.ಮೀ. ಮಳೆಯಾಗಿದೆ. ಹವಾಮಾನ ವರದಿಯಂತೆ ಮುಂದಿನ 24 ಗಂಟೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ ಹೇಳಿದರು.

ಮುನ್ನೆಚ್ಚರಿಕೆ ಕ್ರಮ: ಮಲೆನಾಡಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕೆರೆ, ಕಟ್ಟೆಗಳು, ಹಳ್ಳ ಕೊಳ್ಳಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದು, ಯಾವುದೇ ರೀತಿಯ ಅನಾಹುತಗಳು ಸಂಭವಿಸುವ ಸಾಧ್ಯತೆ
ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ಮಟ್ಟ, ಹೋಬಳಿ ಮಟ್ಟದ ಅಧಿಕಾರಿಗಳು ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರತೀಕ ಬಯಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.