ADVERTISEMENT

ಅರಕಲಗೂಡು: ಗದ್ದೆಗೆ ನುಗ್ಗಿದ ಮಳೆನೀರು

ಅರಕಲಗೂಡು ತಾಲ್ಲೂಕಿನ ವಿವಿಧೆಡೆ ಬುಧವಾರ ರಾತ್ರಿ ಸುರಿದ ಮಳೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 5:18 IST
Last Updated 8 ಜನವರಿ 2021, 5:18 IST
ಅರಕಲಗೂಡು ತಾಲ್ಲೂಕಿನಲ್ಲಿ ಸುರಿದ ಮಳೆಗೆ ಗದ್ದೆಗಳಿಗೆ ನೀರು ಬಂದಿರುವುದು
ಅರಕಲಗೂಡು ತಾಲ್ಲೂಕಿನಲ್ಲಿ ಸುರಿದ ಮಳೆಗೆ ಗದ್ದೆಗಳಿಗೆ ನೀರು ಬಂದಿರುವುದು   

ಅರಕಲಗೂಡು: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆಗೆ ತೀವ್ರ ಹಾನಿಯಾಗಿದ್ದು, ರೈತರನ್ನುಕಂಗೆಡಿಸಿದೆ.

ಕೆಲ ದಿನಗಳಿಂದ ಮೋಡ ಕವಿದ ವಾತಾವರಣದ ನಡುವೆ ಆಗಾಗ ತುಂತುರು ಮಳೆಯಾಗುತ್ತಿತ್ತು. ಬುಧವಾರ ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಮಿಂಚು, ಗುಡುಗು ಸಹಿತ ಶುರುವಾದ ಮಳೆ ರಾತ್ರಿಯಿಡಿ ಧಾರಾಕಾರವಾಗಿ ಸುರಿದ ಪರಿಣಾಮ ಗದ್ದೆಗಳಲ್ಲಿ ಕೊಯ್ಲು ಮಾಡಿದ ಭತ್ತದ ಪೈರು ನೀರಿನಲ್ಲಿ ಮುಳುಗಿದೆ. ಗುರುವಾರ ಬೆಳಿಗ್ಗೆ ಭತ್ತದ ಬೆಳೆ ಹಾನಿಗೊಳಗಾಗಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ಹೇಮಾವತಿ, ಕಾವೇರಿ ನದಿ ನಾಲಾ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಭತ್ತ ಬೆಳೆದ್ದಿದ್ದು, ಕೆಲವೆಡೆ ಕಟಾವು ಕಾರ್ಯ ಮುಗಿಸಿ ಬಣವೆ ಹಾಕಿದ್ದಾರೆ. ಇನ್ನು ಹಲವೆಡೆ ಬೆಳೆದು ನಿಂತಿದ್ದ ರಾಜಮುಡಿ ಭತ್ತ ಮಳೆಗೆ ಹಾನಿಯಾಗಿದೆ. ಹಾರಂಗಿ ಹಾಗೂ ಕಟ್ಟೇಪುರ, ದೊಡ್ಡಮಗ್ಗೆ ನಾಲಾ ಅಚ್ಚುಕಟ್ಟಿನಲ್ಲಿ ಕಟಾವು ಮಾಡಿ ಗದ್ದೆಗಳಲ್ಲಿ ಒಣಗಲು ಹಾಕಿದ್ದ ಭತ್ತ ಫಸಲು ಸಹಿತ ಜಲಾವೃತವಾಗಿದೆ.

ADVERTISEMENT

ಮಳೆ ನೀರಿನಿಂದ ಆವರಿಸಿರುವ ಗದ್ದೆಗಳಲ್ಲಿ ನೀರು ಹೊರ ತೆಗೆಯಲು ರೈತರು ಹರ ಸಾಹಸ ಪಡುತ್ತಿದ್ದಾರೆ. ಕಣಕ್ಕೆ ಸಾಗಿಸಿರುವ ಭತ್ತದ ಪೈರು ತೊಯ್ದಿದೆ. ಸಾವಿರಾರು ರೂಪಾಯಿ ವ್ಯಯಿಸಿ ಬೆಳೆದ ಭತ್ತ ಕಟಾವಿನ ಹಂತದಲ್ಲಿ ಮಳೆಯಿಂದ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ.

‘ನೀರಿನಲ್ಲಿ ಮುಳುಗಿ ಭತ್ತ ಹಾಗೂ ಹುಲ್ಲು ಎರಡೂ ಹಾಳಾಗಿರುವುದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಲಿದೆ. ರಾಗಿ ಹಾಗೂ ಮುಸುಕಿನ ಜೋಳ ಕೂಡ ಹಾನಿಗೊಳಗಾಗಿದೆ. ಅಕಾಲಿಕ ಮಳೆಯಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ’ ಎಂದು ದೊಡ್ಡಮಗ್ಗೆ ಜಗದೀಶ್‌, ಸುಬ್ಬರಾಯೀಗೌಡ, ಸ್ವಾಮಿಶೆಟ್ಟಿ ಅಲವತ್ತು ಕೊಂಡಿದ್ದಾರೆ.

ಮಳೆ ವಿವರ: ಕಸಬಾ 50.1 ಮಿಮೀ, ಮಲ್ಲಿಪಟ್ಟಣ 72.0 ಮಿ.ಮೀ, ಬಸವಾಪಟ್ಟಣ 50.6 ಮಿಮೀ, ಕೊಣನೂರು 12.0 ಮಿಮೀ, ರಾಮನಾಥಪುರ 8.3 ಮಿಮೀ, ದೊಡ್ಡಮಗ್ಗೆ 42.2 ಮಿಮೀ, ದೊಡ್ಡಬೆಮ್ಮತ್ತಿಯಲ್ಲಿ 48.6 ಮಿಮೀ ಮಳೆಯಾಗಿದೆ.

‘ಜನವರಿ ತಿಂಗಳಿನಲ್ಲಿ ಈ ರೀತಿ ಮಳೆ ಅನಿರೀಕ್ಷಿತ. ಅಕಾಲಿಕ ಮಳೆಯ ಪರಿಣಾಮ ಕಟಾವು ಮಾಡಿ ಗದ್ದೆಯಲ್ಲಿ ಆರಲು ಹಾಕಿದ್ದ ಭತ್ತ ಮತ್ತು ಹುಲ್ಲು ಹಾನಿಗೊಳಗಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.