ಹೊಳೆನರಸೀಪುರ: ಕೋಟೆ ಸೀತಾವಿಲಾಸ ರಸ್ತೆಯ ಜಿನಮಂದಿರ ಜೀರ್ಣೋದ್ಧಾರಗೊಂಡಿದ್ದು ಭಾನುವಾರ ಪುನರ್ ಪ್ರತಿಷ್ಠಾಪನೆ ಪೂಜೆಗಳು ನಡೆದವು.
ಸಂಪ್ರೋಕ್ಷಣೆ ಚತುರ್ಮುಖ ಜಿನ ಬಿಂಬ, ಸ್ತಂಭ ಸ್ಥಾಪನೆ ಹಾಗೂ 108 ಕಲಶ ಅಭಿಷೇಕ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿ, ಆರತಿಪುರದ ಸಿದ್ಧಾಂತ ಕೀರ್ತಿ ಸ್ವಾಮಿ, ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.
ಜಿನ ಮಂದಿರವು ಗಂಗರಸರ ಕಾಲದಲ್ಲಿ ಚಾವುಂಡರಾಯ ಮಂತ್ರಿ ಆಗಿದ್ದಾಗ ಸ್ಥಾಪನೆ ಆಗಿದ್ದು ಸಂಪೂರ್ಣ ಶಿಥಿಲವಾಗಿತ್ತು. ಚಾವಣಿ ಉದುರುತ್ತಿದ್ದು ಆತಂಕ ಉಂಟಾಗಿತ್ತು. ಇದನ್ನು ಸಮಾಜ ಭಾಂಧವರ ಸಹಾಯದಿಂದ ಸಂಪೂರ್ಣ ಕಲ್ಲಿನಲ್ಲಿ ಕಟ್ಟಿಸಿ ಜೀರ್ಣೋದ್ದಾರ ಮಾಡಲಾಗಿದೆ. ಏ.30ರಿಂದ ಮೇ 4ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರವಣಬೆಳಗೊಳ ಹೊರತುಪಡಿಸಿ ಬೇರೆಲ್ಲೂ ಇಲ್ಲದ ಗುಳ್ಳಕಾಯಜ್ಜಿ ಮೂರ್ತಿ ಇಲ್ಲಿಯೂ ಇದೆ ಎಂದು ಅರ್ಚಕ ಹಾಗೂ ಜಿನ ಮಂದಿರ ಜೀರ್ಣೋದ್ಧಾರದ ರುವಾರಿ ದಿಲೀಪ್‌ಕುಮಾರ್ ಜೈನ್ ಮತ್ತು ಧೀರಜ್ ಜೈನ್ ವಿವರಿಸಿದರು.
ಜೀರ್ಣೋದ್ದಾರದ ಪ್ರಯುಕ್ತ ಸೀತಾವಿಲಾಸ ರಸ್ತೆಯನ್ನು ವಿವಿಧ ಬಗೆಯ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ನೂತನ ಜಿನ ಮಂದಿರವು ವಿವಿಧ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ನಗರದ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.