ADVERTISEMENT

ಜನರ ಕಷ್ಟಗಳಿಗೆ ಸ್ಪಂದಿಸಿ: ಪೊಲೀಸ್‌ ಮಹಾನಿರ್ದೇಶಕ ಪದಮ್‌ ಕುಮಾರ್‌ ಗರ್ಗ್ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 13:28 IST
Last Updated 26 ಫೆಬ್ರುವರಿ 2021, 13:28 IST
ಶಾಂತಿಗ್ರಾಮ ಪೊಲೀಸ್‌ ತರಬೇತಿ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಿಕ ಪೊಲೀಸ್‌ಪ್ರಶಿಕ್ಷಣಾರ್ಥಿಗಳು ಪಥ ಸಂಚಲನ ನಡೆಸಿದರು.
ಶಾಂತಿಗ್ರಾಮ ಪೊಲೀಸ್‌ ತರಬೇತಿ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಿಕ ಪೊಲೀಸ್‌ಪ್ರಶಿಕ್ಷಣಾರ್ಥಿಗಳು ಪಥ ಸಂಚಲನ ನಡೆಸಿದರು.   

ಹಾಸನ: ಪೊಲೀಸ್‌ ಕಾನ್‌ಸ್ಟೆಬಲ್‌ ತರಬೇತಿ ಪಡೆದಿರುವ ಎಲ್ಲರಿಗೂ ಜನ ಸಾಮಾನ್ಯರ ಕಷ್ಟಗಳ ಬಗ್ಗೆ ಸ್ಪಂದನೆಇರಬೇಕು, ಇಲ್ಲದಿದ್ದರೆ ತರಬೇತಿ ವ್ಯರ್ಥವಾಗುತ್ತದೆ ಎಂದು ತರಬೇತಿ ವಿಭಾಗದ ಪೊಲೀಸ್‌ ಮಹಾನಿರ್ದೇಶಕಪದಮ್ ಕುಮಾರ್ ಗರ್ಗ್ ಹೇಳಿದರು.

ತಾಲ್ಲೂಕಿನ ಶಾಂತಿಗ್ರಾಮ ಪೊಲೀಸ್‌ ತರಬೇತಿ ಶಾಲೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 5ನೇ ತಂಡದ
ನಾಗರಿಕ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಮಾತನಾಡಿದರು.

ಬಹುತೇಕರು ಈ ಹುದ್ದೆಗೂ ಮೀರಿದ ವಿದ್ಯಾರ್ಹತೆ ಇರುವವರು ಇದ್ದಾರೆ. ಇನ್ನೂ ಉನ್ನತ ಹುದ್ದೆಗೆ ಹೋಗುವ
ಕನಸು ಅನೇಕರಿಗೆ ಇರಬಹುದು. ಆ ರೀತಿ ಇದ್ದರೆ ವ್ಯಾಸಂಗ ಮುಂದುವರಿಸುವ ಮೂಲಕ ಉನ್ನತ ಹಂತ
ತಲುಪಬೇಕು. ಮನಸ್ಸಿನಲ್ಲಿ ತಮ್ಮ ಹುದ್ದೆಯ ಬಗ್ಗೆ ಸಕಾರಾತ್ಮಕ ಭಾವನೆ ಇರಬೇಕು ಎಂದು ನುಡಿದರು.

ADVERTISEMENT

ವೇತನ, ಪಿಂಚಣಿ ಸೇರಿದಂತೆ ಸರ್ಕಾರದ ಎಲ್ಲ ಸವಲತ್ತು ಸಿಗುವ ಉದ್ಯೋಗವನ್ನು ಭಗವಂತ ಕರುಣಿಸಿದ್ದಾನೆ
ಎಂದು ಹೆಮ್ಮೆ ಪಡಬೇಕು. ಕೆಲವರಿಗೆ ಮಾತ್ರ ಒಲಿದು ಬರುವ ಈ ಅವಕಾಶದ ಸದುಪಯೋಗ
ಮಾಡಿಕೊಳ್ಳಬೇಕು ಎಂದರು.

ಜ್ಞಾನ ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶ ಈ ಹುದ್ದೆಯಲ್ಲಿ ಸಿಗಲಿದ್ದು, ಸಿವಿಲ್‌ ವಿಭಾಗದವರು ಗುಪ್ತದಳ,
ಸಿಐಡಿ, ಸಿಬಿಐ ಡೆಪ್ಯೂಟೇಷನ್‌ ಪಡೆಯಲು ಅನೇಕ ಅವಕಾಶಗಳಿವೆ. ತರಬೇತಿ ಪೂರ್ಣಗೊಳಿಸಿರುವ ಎಲ್ಲರೂ
ತಮಗೆ ವಹಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ನಿಭಾಯಿಸಬೇಕು ಎಂದು ಸಲಹೆ ನೀಡಿದರು.

145 ಪ್ರಶಿಕ್ಷಣಾರ್ಥಿಗಳಿಗೆ ಕಳೆದ ಎಂಟು ತಿಂಗಳಿಂದ ನೀಡಿದ ತರಬೇತಿ ಶುಕ್ರವಾರ ಕೊನೆಗೊಂಡಿದೆ.
ಪೊಲೀಸ್‌ ಇಲಾಖೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಗರ್ಗ್ ಅವರಿಗೆ ನೆನಪಿನ ಕಾಣಿಕೆ ನೀಡಿ
ಗೌರವಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರಶಿಕ್ಷಣಾರ್ಥಿಗಳ ಪೋಷಕರು ಕಾರ್ಯಕ್ರಮ
ಕಣ್ತುಂಬಿಕೊಂಡರು.

ಪೊಲೀಸ್‌ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‍ಗೌಡ, ಶಾಂತಿಗ್ರಾಮ ತರಬೇತಿ ಶಾಲೆ ಪ್ರಾಂಶುಪಾಲ ಎ.
ಮಾರುತಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.