ADVERTISEMENT

ಲಾಕ್‌ಡೌನ್ ಪುನರ್‌ ಪರಿಶೀಲಿಸಿ: ಎಚ್‌ಕೆಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 7:12 IST
Last Updated 5 ಜುಲೈ 2021, 7:12 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಸಕಲೇಶಪುರ: ‘ಇಡೀ ರಾಜ್ಯದಲ್ಲಿ ಲಾಕ್‌ಡೌನ್‌ ಸಂಪೂರ್ಣ ಸಡಿಲಿಕೆ ಆಗಿದ್ದರೂ, ಹಾಸನ ಜಿಲ್ಲೆಯಲ್ಲಿ ಮಾತ್ರ ವಾರದಲ್ಲಿ ಮೂರು ದಿನ ಲಾಕ್‌ಡೌನ್‌ ಪುನಃ ಮುಂದುವರೆಸಿರುವುದನ್ನು ಜಿಲ್ಲಾಧಿಕಾರಿಗಳು ಪುನರ್‌ ಪರಿಶೀಲನೆ ಮಾಡಬೇಕು’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಭಾನುವಾರ ಅಭಿಪ್ರಾಯ ವ್ಯಕ್ತಪಡಿಸಿದರು.

ವಾರದಲ್ಲಿ ಮೂರು ದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಅವಕಾಶ ನೀಡುವುದರಿಂದ ವ್ಯಾಪಾರ ವಹಿವಾಟು, ಬ್ಯಾಂಕ್‌ ಎಲ್ಲಾ ಕಡೆಯೂ ಜನರ ನೂಕು ನುಗ್ಗಲು, ರಸ್ತೆಗಳಲ್ಲಿ ವಾಹನಗಳ ದಟ್ಟಣೆಯಿಂದ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌, ಸಮಸ್ಯೆ ಕಳೆದ ವರ್ಷ ಹಾಗೂ ಈ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿ ಉಂಟಾಗುತ್ತಿರುವುದನ್ನು ಕಂಡಿದ್ದೇವೆ. ಪರಸ್ಪರ ಅಂತರ ಕಾಪಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಜೊತೆಗೆ ಬೀದಿ ಬದಿ ವ್ಯಾಪಾರಿಗಳು, ಪ್ರತಿ ದಿನ ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳುವ ಸಣ್ಣ ವ್ಯಾಪಾರಿಗಳು, ಹೋಟೆಲ್‌ ಮಾಲೀಕರು ಪ್ರತಿಯೊಬ್ಬರಿಗೂ ಆರ್ಥಿಕ ನಷ್ಟ ಉಂಟಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

‘ಲಾಕ್‌ ಡೌನ್‌ ಪುನಃ ಮುಂದುವರೆಸಿದರೆ ಸಮಸ್ಯೆ ಹೆಚ್ಚಾಗುತ್ತದೆಯೇ ಹೊರತು ಪರಿಹಾರ ಖಂಡಿತಾ ಸಾಧ್ಯವಿಲ್ಲ. ಲಾಕ್‌ಡೌನ್‌ ಸಡಿಲಿಕೆ ಮಾಡಿ ಕಟ್ಟುನಿಟ್ಟಿನ ನಿಯಮ ಪಾಲಿಸಲು ಸೂಚಿಸಿ, ತಪ್ಪಿದರೆ ದಂಡ ವಿಧಿಸಿ, ಆದರೆ ಲಾಕ್‌ಡೌನ್‌ ಪುನಃ ಮುಂದುವರೆಸುವುದು ಸೂಕ್ತ ಅಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಪರವಾದ ತಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ADVERTISEMENT

ಹುಸಿಯಾದ ಭರವಸೆ: ಪುನಃ ಸಂಕಷ್ಟದಲ್ಲಿ ಉದ್ಯಮ

ಸಕಲೇಶಪುರ: ‘ಸೋಮವಾರದಿಂದ ಹೋಟೆಲ್‌, ಅಂಗಗಳನ್ನೆಲ್ಲಾ ತೆರೆಯಲು ಸಿದ್ಧತೆ ಮಾಡಿಕೊಂಡ ಬೆನ್ನ ಹಿಂದೆಯೇ ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರೆಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ನಿರಾಶೆ ಮೂಡಿಸಿದೆ.

‘ಕಳೆದ ಎರಡೂವರೆ ತಿಂಗಳಿಂದ ಸಂಪೂರ್ಣ ಬಂದ್ ಮಾಡಲಾಗಿದ್ದ ಹೋಟೆಲ್‌ಗಳು, ಹೋಂ ಸ್ಟೇ, ರೆಸಾರ್ಟ್‌ಗಳನ್ನು ಭಾನುವಾರ ಇಡೀ ದಿನ ಸ್ವಚ್ಛಗೊಳಿಸಲಾಗಿದೆ. ಸಿಬ್ಬಂದಿ ಪುನಃ ಕೆಲಸಕ್ಕೆ ಹಾಜರಾಗಿದ್ದಾರೆ. ಈಗ ಮತ್ತೆ ಲಾಕ್‌ಡೌನ್‌ ಮುಂದುವರೆಯಲಿದೆ ಎಂದು ಹೇಳಿದ್ದು ಕಷ್ಟಕ್ಕೆ ನೂಕಿದೆ.

‘ನಮ್ಮ ಐದು ಹೋಟೆಲ್‌ಗಳಿಂದ 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪುನಃ ಕರೆಸಿಕೊಂಡಿದ್ದೇವೆ. ಮತ್ತೆ ಅವರನ್ನು ಊರಿಗೆ ಕಳುಹಿಸುವುದು ಕಷ್ಟ. ಸಲಹಲು ಆಗುವುದಿಲ್ಲ. ದೂರದ ಊರುಗಳಿಂದ ಬಂದಿದ್ದಾರೆ ಮತ್ತೆ ವಾಪಸ್‌ ಕಳಿಸೋ ಹೇಗೆಯೂ ಇಲ್ಲ. ಕಳೆದ ಎರಡು ವರ್ಷಗಳಿಂದ ನಮ್ಮದು ಮಾತ್ರವಲ್ಲ ಇಡೀ ಹೊಟೆಲ್‌ ಉದ್ಯಮ ಸಂಪೂರ್ಣ ನಷ್ಟದಲ್ಲಿ ನಡೆಯುತ್ತಿದೆ’ ಎಂದು ಸುರಿಭೀಸ್‌ ಹೋಟೆಲ್‌ ಮಾಲೀಕ ಸಂಜಿತ್ ಶೆಟ್ಟಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.