ನುಗ್ಗೇಹಳ್ಳಿ: ‘ಹೋಬಳಿಯ ಹೊನ್ನಮಾರನಹಳ್ಳಿ ಹಟ್ಟಿ ಮಾರಮ್ಮ ದೇಗುಲ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ₹1.50 ಲಕ್ಷ ಅನುದಾನ ನೀಡಿದ್ದಾರೆ’ ಎಂದು ಹಿರಿಯ ಜೆಡಿಎಸ್ ಮುಖಂಡ ಹಾಗೂ ಕೃಷಿ ಪತ್ತಿನ ನಿರ್ದೇಶಕ ತೋಟಿ ನಾಗರಾಜ್ ತಿಳಿಸಿದರು.
ಹೋಬಳಿ ಹೊನ್ನಮಾರನಹಳ್ಳಿಯ ಹಟ್ಟಿ ಮಾರಮ್ಮ ದೇವಾಲಯ ಸಮಿತಿ ಸದಸ್ಯರಿಗೆ ₹1.50 ಲಕ್ಷ ಅನುದಾನವನ್ನು ಶಾಸಕರ ಪರವಾಗಿ ನೀಡಿ ಮಾತನಾಡಿದರು.
‘ಸಿ.ಎನ್.ಬಾಲಕೃಷ್ಣ ಅವರು ವೈಯಕ್ತಿಕವಾಗಿ ಈಗಾಗಲೇ ₹75 ಸಾವಿರ ನೀಡಿದ್ದಾರೆ’ ಎಂದರು.
‘ಗ್ರಾಮಸ್ಥರ ಒತ್ತಾಯದಂತೆ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದಿಂದ ಪುರಾಣ ಪ್ರಸಿದ್ಧ ಮಾಸ್ತಿಯಮ್ಮ ದೇವಾಲಯದ ಹೊರಗಿನ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇದರ ಜೊತೆಗೆ ಸುಮಾರು ₹52 ಲಕ್ಷ ವೆಚ್ಚದಲ್ಲಿ ಗ್ರಾಮದ ವಿವಿಧ ಬಡಾವಣೆಗಳ ಕಾಂಕ್ರೀಟ್ ರಸ್ತೆ, ಒಳಚರಂಡಿ ನಿರ್ಮಾಣಕ್ಕೆ ಶಾಸಕರು ಅನುದಾನ ನೀಡಿದ್ದಾರೆ. ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ ಮತ್ತು ಒಂಟಿ ಮಾವಿನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇಗುಲ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಸೇರಿದಂತೆ ಈ ಭಾಗದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ. ಮುಂಬರುವ ದಿನಗಳಲ್ಲೂ ಶಾಸಕರು ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾರೆ ಎಂಬ ಭರವಸೆ ಇದೆ’ ಎಂದು ತಿಳಿಸಿದರು.
ಹಟ್ಟಿ ಮಾರಮ್ಮ ದೇವಾಲಯ ಸಮಿತಿ ಸದಸ್ಯ ದೊಡ್ಡಯ್ಯ ಮಾತನಾಡಿ,‘ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ್ ಕುಮಾರ್ ಹಾಗೂ ಮಾಜಿ ಕೃಷಿ ಪತ್ತಿನ ಅಧ್ಯಕ್ಷರಾದ ರಂಗಸ್ವಾಮಿ ಅವರು ಕೂಡ ದೇವಲಯ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ ಇದರಿಂದ ದೇವಾಲಯದ ನಿರ್ಮಾಣ ಬೇಗ ಪೂರ್ಣಗೊಂಡಿದೆ’ ಎಂದರು.
ಈ ಸಂದರ್ಭ ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ್ ಕುಮಾರ್, ಮುಖಂಡ ಮಾಸ್ತಿಗೌಡ್ರು, ದೇವಾಲಯ ಸಮಿತಿ ಸದಸ್ಯ ಕೃಷ್ಣಮೂರ್ತಿ, ದೊಡ್ಡಯ್ಯ, ಸುನಿಲ್, ಶೃತಿ, ಶರತ್, ಮೂರ್ತಿ, ಮಂಜು, ಶಶಿಧರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.