ಅಮಾನತು
ಸಕಲೇಶಪುರ: ಇಲ್ಲಿನ ಎಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಯೊಬ್ಬರ ಜನ್ಮದಿನ ಆಚರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಇಲ್ಲಿನ ಎಆರ್‌ಟಿಒ ಕಚೇರಿಯ ಮೋಟಾರು ವಾಹನ ನಿರೀಕ್ಷಕಿ ಎನ್.ಆರ್. ಆಶಾ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎನ್. ಮಧುರಾ, ಕಚೇರಿ ಅಧೀಕ್ಷಕ ಎಂ.ಕೆ. ಗಿರೀಶ್ ಅವರನ್ನು ಅಮಾನತು ಮಾಡಿ, ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಆದೇಶ ಹೊರಡಿಸಿದ್ದಾರೆ.
ಜುಲೈ 11 ರಂದು ಇಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಧ್ಯವರ್ತಿ ಮೋಹನ್ ಎಂಬುವವರ ಜನ್ಮದಿನವನ್ನು ಆಚರಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿತ್ತು. ಅಧಿಕಾರಿಗಳ ಅಮಾನತು ಮಾಡುವಂತೆ ಮಲೆನಾಡು ರಕ್ಷಣಾ ವೇದಿಕೆ ಸದಸ್ಯರು ಆಗ್ರಹಿಸಿದ್ದರು.
ವರದಿಗಳನ್ನು ಪರಿಶೀಲಿಸಿದ ಸಾರಿಗೆ ಇಲಾಖೆಯ ಆಯುಕ್ತ ಯೋಗೀಶ್, ಈ ಪ್ರಕರಣದಲ್ಲಿ ಮೂವರು ತಪ್ಪಿತಸ್ಥರು ಎಂದು ಪರಿಗಣಿಸಿ, ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.