ಕೊಣನೂರು (ಹಾಸನ): ‘ಸಂಗೀತದ ಹಬ್ಬ’ವೆಂದೇ ಪ್ರಖ್ಯಾತವಾಗಿರುವ ಇಲ್ಲಿನ ರುದ್ರಪಟ್ಟಣದ 5 ದಿನಗಳ ಸಂಗೀತೋತ್ಸವಕ್ಕೆ ಬುಧವಾರ ಅದ್ದೂರಿ ಚಾಲನೆ ದೊರಕಿತು. 22ನೇ ವರ್ಷದ ಸಂಗೀತೋತ್ಸವದಲ್ಲಿ ಮೊದಲ ದಿನವೇ ಯುವ ಪ್ರತಿಭೆಗಳು ತಮ್ಮ ಹಾಡುಗಾರಿಕೆ, ನೃತ್ಯಗಳಿಂದ ಜನರ ಮನಸೂರೆಗೊಂಡರು.
ಗಾಯಕಿ ಮಧುರಾ ಪ್ರಶಾಂತ್ ನಡೆಸಿಕೊಟ್ಟ ಕಛೇರಿಯಲ್ಲಿ ‘ಮಹಾಗಣಪತಿ’ ಕೃತಿಯನ್ನು ಅಠಾಣ ರಾಗದಲ್ಲಿ, ತ್ಯಾಗರಾಜರ ‘ಶ್ರೀರಾಮ ಪಾದಮ’ ಕೃತಿಯನ್ನು ಅಮೃತ ವಾಹಿನಿ ರಾಗದಲ್ಲಿ, ‘ಬ್ರೋವ ಭಾರಮಾ’ ಕೃತಿಯನ್ನು ಬಹುದಾರಿ ರಾಗದಲ್ಲಿ ಮತ್ತು ವಾದಿರಾಜರ ಕೃತಿ ‘ನಾರಾಯಣ ಎನ್ನಿರೋ’ ಅನ್ನು ಹಂಸಧ್ವನಿ ರಾಗದಲ್ಲಿ ಪ್ರಸ್ತುತಪಡಿಸಿದರು.
ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಆಯೋಜಕ ವಿದ್ವಾನ್ ಆರ್.ಕೆ.ಪದ್ಮನಾಭ್, ‘ರುದ್ರಪಟ್ಟಣದಲ್ಲಿ ಜರುಗುವ ಸಂಗೀತೋತ್ಸವದಲ್ಲಿ ದೇಶದ ವಿವಿಧ ಭಾಗಗಳ ಸಂಗೀತ ಕಲಾವಿದರು ಸ್ವಯಂ ಆಸಕ್ತಿಯಿಂದ ಕಾರ್ಯಕ್ರಮ ನೀಡುವ ರೀತಿಯು ಇಲ್ಲಿನ ಸಂಗೀತ ಪರಂಪರೆಗೆ ದೊರಕುತ್ತಿರುವ ದೊಡ್ಡ ಗೌರವ’ ಎಂದರು.
‘22 ವರ್ಷಗಳಿಂದ ಜರುಗುತ್ತಿರುವ ಸಂಗೀತೋತ್ಸವದಲ್ಲಿ, ವರ್ಷದಿಂದ ವರ್ಷಕ್ಕೆ ಕಲಾವಿದರು ಮತ್ತು ಶ್ರೋತೃಗಳ ಸಂಖ್ಯೆ ಹೆಚ್ಚಾಗುತ್ತಿದೆ. 5 ದಿನಗಳ ಸಂಗೀತದ ಹಬ್ಬ ಆಚರಣೆ ಮಾಡುತ್ತಿರುವುದು ಅವಿಸ್ಮರಣೀಯ ಕ್ಷಣ. ರುದ್ರಪಟ್ಟಣದ ಸಂಗೀತೋತ್ಸವಕ್ಕೆ ಬೇಡಿಕೆ ಹೆಚ್ಚುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.