ADVERTISEMENT

ಸಕಲೇಶಪುರದಲ್ಲಿ ತುರ್ತು ನಿರ್ವಹಣಾ ಘಟಕ

ಜಿಲ್ಲೆಯಲ್ಲಿ ಸಂಭವನೀಯ ಅಗ್ನಿ ಅನಾಹುತ ತಪ್ಪಿಸಲು ಕ್ರಮ: ಡಿಸಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 13:40 IST
Last Updated 22 ನವೆಂಬರ್ 2019, 13:40 IST
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ವಿಕೋಪ ನಿರ್ವಹಣೆ ಪೂರ್ವ  ಸಿದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ವಿಕೋಪ ನಿರ್ವಹಣೆ ಪೂರ್ವ  ಸಿದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿದರು.   

ಹಾಸನ: ಜಿಲ್ಲೆಯಲ್ಲಿ ಇಂಧನ ಹಾಗೂ ಅನಿಲ ಟ್ಯಾಂಕರ್‌ಗಳ ಅಪಘಾತಗಳಾಗುತ್ತಿದ್ದು, ಸಂಭವನೀಯ ಅಗ್ನಿ ಅನಾಹುತ ತಪ್ಪಿಸಲು ಸಕಲೇಶಪುರದಲ್ಲಿ ಸಂಬಂಧಪಟ್ಟ ಸಂಸ್ಥೆಗಳ ತುರ್ತು ಪ್ರತಿಕ್ರಿಯಾ ಮತ್ತು ನಿರ್ವಹಣಾ ಘಟಕ ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಜಿಲ್ಲಾ ಮಟ್ಟದ ವಿಕೋಪ ನಿರ್ವಹಣೆ ಪೂರ್ವ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮೂಲಕ ಪೆಟ್ರೋಲ್ ಹಾಗೂ ಗ್ಯಾಸ್ ಸರಬರಾಜು ಆಗುತ್ತಿದ್ದು, ಇದರಿಂದ ಸಂಭವಿಸಬಹುದಾದ ಅಪಾಯಗಳನ್ನು ವ್ಯವಸ್ಥಿತವಾಗಿ ನಿಭಾಯಿಸಲು ಎಲ್ಲಾ ಸಾಧನಗಳು ಮತ್ತು ಮಾನವ ಸಂಪನ್ಮೂಲ ಘಟಕ ಇರಬೇಕು ಎಂದು ತಿಳಿಸಿದರು.

ಮಂಗಳೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ನೂರಾರು ಇಂಧನ ಟ್ಯಾಂಕರ್‌ಗಳು ಸಂಚರಿಸುತ್ತಿದ್ದು, ಆಗಾಗ್ಗೆ ರಸ್ತೆ ಅಪಘಾತಗಳು ನಡೆಯುತ್ತಿವೆ. ಆದರೆ ಇದನ್ನು ನಿಭಾಯಿಸಲು ಮಂಗಳೂರು ಅಥವಾ ಬೆಂಗಳೂರಿನ ತಂಡಗಳನ್ನು ಅವಲಂಬಿಸಬೇಕಾಗುತ್ತಿದೆ. ಹಾಗಾಗಿ ಎಚ್.ಪಿ.ಸಿ.ಎಲ್, ಇಂಡಿಯನ್ ಆಯಿಲ್ ಸೇರಿದಂತೆ ಎಲ್ಲಾ ಇಂಧನ ಸಂಸ್ಥೆಗಳು ಚರ್ಚಿಸಿ ಒಟ್ಟಾರೆಯಾಗಿ ಒಂದು ಅಥವಾ ಸಂಸ್ಥೆವಾರು ಪ್ರತ್ಯೇಕ ತುರ್ತು ನಿರ್ವಹಣೆ ತಂಡ ಹಾಗೂ ವಾಹನಗಳನ್ನು ಜಿಲ್ಲೆಯಲ್ಲಿಯೇ ನಿಯೋಜಿಸಬೇಕು. ಇದನ್ನು ಈ ಬಾರಿಯ ವಿಕೋಪ ನಿರ್ವಹಣಾ ಯೋಜನಾ ವರದಿಯಲ್ಲಿಯೂ ಸೇರ್ಪಡೆಗೊಳಿಸಲಾಗುವುದು ಎಂದು ವಿವರಿಸಿದರು.

ADVERTISEMENT

ಎಚ್.ಪಿ.ಸಿ.ಎಲ್ ಮತ್ತು ಇಂಡಿಯನ್ ಆಯಿಲ್ ಸಂಸ್ಥೆಗಳು ಸಹ ಜಿಲ್ಲಾಡಳಿತದ ಈ ತುರ್ತು ನಿರ್ವಹಣಾ ಕೋಶದೊಂದಿಗೆ ಸಹಕರಿಸಬೇಕು. ಪ್ರತ್ಯೇಕ ತುರ್ತು ಪ್ರತಿಕ್ರಿಯಾ ತಂಡಗಳನ್ನು ಜಿಲ್ಲೆಯೊಳಗೆ ಹೊಂದಿರಬೇಕು ಎಂದು ಸಂಸ್ಥೆಯ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕಾವೇರಿ, ಹೇಮಾವತಿ ನದಿಗಳ ಪ್ರವಾಹದಿಂದ ಆಗುವ ಅಪಾಯಗಳು. ಅತಿವೃಷ್ಟಿ ಸಂದರ್ಭದಲ್ಲಿ ಮಲೆನಾಡು ಭಾಗ ಗುಡ್ಡ ಕುಸಿತ, ಮತ್ತಿತರ ಅಪಾಯಗಳ ನಿರ್ವಹಣೆ ಅತ್ಯಂತ ನುರಿತ ತಂಡ ಮತ್ತು ಸಾಧನೆಗಳ ಅಗತ್ಯವಿದೆ. ಆಯಾ ತಾಲ್ಲೂಕುಗಳಲ್ಲಿ ಇವುಗಳನ್ನು ಕೇಂದ್ರೀಕರಿಸಿ ಇಡಬೇಕಾಗಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರು ಪ್ರಕೃತಿ ವಿಕೋಪ ನಿರ್ವಹಣೆ ಬಗ್ಗೆ ಹಲವು, ಸಲಹೆ, ಸೂಚನೆ ನೀಡಿದರು.

ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ರಂಗನಾಥ್. ಎಚ್.ಪಿ.ಸಿ.ಎಲ್. ಮತ್ತು ಇಂಡಿಯನ್ ಆಯಿಲ್ ಸಂಸ್ಥೆಯ ಪ್ರತಿನಿಧಿಗಳು, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಆನಂದ್, ಜಂಟಿ ಕೃಷಿ ನಿರ್ದೇಶಕ ಡಾ. ಮಧುಸೂಧನ್, ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ರಾಮ್‍ಪ್ರಕಾಶ್ ಅವರು ಅನುಭವಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.