
ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಶಂಭುಲಿಂಗೇಶ್ವರ ದೇವರ ಕೊಂಡೋತ್ಸವ ಶ್ರದ್ಧಾ, ಭಕ್ತಿಯಿಂದ ನಡೆಯಿತು.
ದೇವಾಲಯದ ಮುಂದೆ ಸಿದ್ದಪಡಿಸಿದ್ದ ಕೊಂಡವನ್ನು ದೇವರ ಗುಡ್ಡಪ್ಪ ಹಾಯ್ದರು. ಹರಕೆ ಹೊತ್ತ ಕೆಲವು ಭಕ್ತರು ಕೆಂಡ ಮೇಲೆ ನಡೆದರು. ಕೊಂಡ ಹಾಯುವಾಗ ಉಘೇ ಶಂಭಪ್ಪ.... ಎಂಬ ಘೋಷಣೆಗಳು ಮೊಳಗಿದವು. ಕೊಂಡೋತ್ಸವಕ್ಕಾಗಿ ದೇವಾಲಯದ ಮುಂದೆ 40 ಅಡಿ ಉದ್ದದ ಕೊಂಡವನ್ನು ಸಿದ್ದಪಡಿಸಲಾಗಿತ್ತು. ಸೋಮವಾರ ಸಂಜೆ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿತ್ತು. ಸುಮಾರು 10 ಟನ್‌ಗಳಷ್ಟು ಸೌದೆಯನ್ನು ಕೊಂಡದಲ್ಲಿ ಜೋಡಿಸಿದ್ದರು.
ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಮುಂಜಾನೆ ವರೆಗೆ ಶಂಭುಲಿಂಗೇಶ್ವರ ದೇವರ ಉತ್ಸವ ನಡೆಯಿತು. ಊರಿನ ಮುಖ್ಯ ರಸ್ತೆ, ಮಾರಿಗುಡಿ ಬೀದಿ, ಗರಡಿ ಮನೆ ಬೀದಿ, ಅರಳಿಕಟ್ಟೆ ವೃತ್ತ, ಕೈ ಮರ ಬೀದಿ ಇತರ ಮಾರ್ಗಗಳಲ್ಲಿ ಮಂಗಳ ವಾದ್ಯ ಸಹಿತ ಉತ್ಸವ ಸಾಗಿತು. ಉತ್ಸವ ಸಾಗಿದ ಮಾರ್ಗದ ಉದ್ದಕ್ಕೂ ಭಕ್ತರು ಈಡುಗಾಯಿ ಒಡೆದರು. ಪಂಜು ಮತ್ತು ಕರ್ಪೂರದ ಸೇವೆ ಸಲ್ಲಿಸಿದರು.
ಪಟ್ಟಣದ ಪಶ್ಚಿಮ ವಾಹಿನಿ ಬಳಿ ಸೋಮವಾರ ಸಂಜೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಂಗನತಿಟ್ಟು ಪಕ್ಷಿಧಾಮದ ಮಾರ್ಗವಾಗಿ ಎರಡು ಕಿ.ಮೀ. ದೂರದ ಪಾಲಹಳ್ಳಿವರೆಗೆ ದೇವರ ಮೂರ್ತಿಯನ್ನು ಸರ್ವಾಲಂಕೃತ ವಾಹನದಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು.
ಹಾರಗಳ ಸಮರ್ಪಣೆ: ಶಂಭುಲಿಂಗೇಶ್ವರ ದೇವರಿಗೆ ಭಕ್ತರು ಬಗೆ ಬಗೆಯ ಆಕರ್ಷಕ ಹಾರಗಳನ್ನು ಸಮರ್ಪಿಸಿದರು. ಬೆಲ್ಲ ಮತ್ತು ಕೊಬ್ಬರಿ ಹಾರ, ಹಣ್ಣುಗಳ ಹಾರ ಹಾಗೂ ಬಗೆ ಬಗೆಯ ಹೂವಿನ ಬೃಹತ್ ಹಾರಗಳು ಗಮನ ಸೆಳೆದವು. ಕ್ರೇನ್ ಮೂಲಕ ದೇವರಿಗೆ ಹಾರಗಳನ್ನು ಹಾಕಿದರು. ಸ್ಥಳೀಯರು ಮಾತ್ರವಲ್ಲದೆ ಜಿಲ್ಲೆ, ಹೊರ ಜಿಲ್ಲೆಗಳ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.