ADVERTISEMENT

ಶರಣರ ಅವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ

ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 14:26 IST
Last Updated 23 ನವೆಂಬರ್ 2019, 14:26 IST
 ಹಾಸನ ಸಮೀಪದ ಹನುಮಂತಪುರದಲ್ಲಿದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿದಲ್ಲಿ ಭಾಗವಹಿಸಿದ್ದ ಜನರು.
 ಹಾಸನ ಸಮೀಪದ ಹನುಮಂತಪುರದಲ್ಲಿದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿದಲ್ಲಿ ಭಾಗವಹಿಸಿದ್ದ ಜನರು.   

ಹಾಸನ: ಸಾಮಾಜಿಕ ಸಮಾನತೆ, ಶಿಕ್ಷಣ, ಧಾರ್ಮಿಕ ನಂಬಿಕೆ ಹಾಗೂ ಇತರ ವಿಚಾರಗಳ ಕುರಿತು ಶರಣರ ಅವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರ ಸಮೀಪದ ಹನುಮಂತಪುರ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಅಖಿಲ ಭಾರತ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಹನುಮಂತಪುರ ಗ್ರಾಮ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಏರ್ಪಡಿಸಿದ್ದ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿದ ಕೀರ್ತಿ ಬಸವಣ್ಣ ಹಾಗೂ ಅಲ್ಲಮ ಪ್ರಭು ಅವರಿಗೆ ಸಲ್ಲುತ್ತದೆ. ವೈಚಾರಿಕ ಕ್ರಾಂತಿಗೆ ಮುನ್ನುಡಿ ಬರೆದ 12ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ಸಮಾಜದ ಕಠೋರ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಪರಿಹಾರ ಕಲ್ಪಿಸಿದರು. ಪ್ರಸ್ತುತ ದಿನಗಳಲ್ಲಿ ವ್ಯಕ್ತಿ ಪ್ರಾಮಾಣಿಕವಾಗಿ ಬದುಕಬೇಕೆಂದರೆ ವಚನಗಳ ಸಾರ ಅರಿಯಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಸಮ್ಮೇಳನ ಅಧ್ಯಕ್ಷೆ ವಿಜಯ ಹಾಸನ್ ಮಾತನಾಡಿ, ಉದಾತ್ತ ಚಿಂತನೆ, ಗುರಿ, ಜೀವನ ಶೈಲಿ ಹಾಗೂ ಹೊಸ ಬೆಳಕನ್ನು ತೋರಿಸುವ ನಿಸ್ವಾರ್ಥ ವಿಚಾರಧಾರೆಗಳನ್ನು ಒಳಗೊಂಡ ಸಾಹಿತ್ಯ ರಚನೆಯಲ್ಲಿ ಯುವ ಲೇಖಕರು ತೊಡಗಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಭಾರತೀಯ ಸಂಸ್ಕೃತಿಯ ಜೀವಾಳವಾದ ಮಾನವೀಯ ಮೌಲ್ಯಗಳನ್ನು ಕಾಣುವ ಜೀವಿಗಳ ಹಿತ ಚಿಂತನೆ, ಉದಾತ್ತ ಮನೋಭಾವ, ಗಾಂಧೀಜಿ ಅವರ ಆದರ್ಶ ಸರಳ ಜೀವನವನ್ನು ಸಾಹಿತ್ಯದ ಮೂಲಕ ಜಗತ್ತಿಗೆ ಪರಿಚಯಿಸಬೇಕಿದೆ. ಸಾಮಾಜಿಕ ಸ್ವಾಸ್ಥೃ ಕಾಪಾಡುವ ಗುರುತರ ಜವಾಬ್ದಾರಿ ಸಾಹಿತಿಗಳ ಮೇಲಿದೆ ಎಂದು ಪ್ರತಿಪಾದಿಸಿದರು.

12ನೇ ಶತಮಾನ ಕನ್ನಡ ನಾಡಿನ ಚರಿತ್ರೆ, ಧರ್ಮ ಹಾಗೂ ಸಾಹಿತ್ಯ ದೃಷ್ಟಿಯಿಂದ ಪ್ರಮುಖ ಕಾಲಘಟ್ಟವಾಗಿದೆ. ಕೆಲವರ ಸ್ವತ್ತಾಗಿದ್ದ ಧರ್ಮ ರಹಸ್ಯ ವಚನಕಾರರಿಂದ ಜನಸಾಮಾನ್ಯರಿಗೆ ನಿಲುಕುವಂತಾಯಿತು. ಬಸವಣ್ಣನವರು ತಮ್ಮ ಭಕ್ತಿ ಪ್ರಧಾನ ವಚನಗಳ ಮೂಲಕ ಸಮಾಜದ ಅಂಕು ಡೊಂಕು, ಮೇಲು ಕೀಳು, ಡಂಬಾಚಾರ, ಮೂಢ ನಂಬಿಕೆಗಳ ವಿರುದ್ಧ ಧ್ವನಿ ಎತ್ತಿದರು ಎಂದು ನುಡಿದರು.

ಸಮ್ಮೇಳನ ಉದ್ಘಾಟಿಸಿದ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಮಾತನಾಡಿ, ಸಮಾನತೆಗಾಗಿ ಶರಣರು ಮಾಡಿದ ಹೋರಾಟವನ್ನು ವಚನಗಳಲ್ಲಿ ಕಾಣಬಹುದು. ದುರಾಸೆ, ಸ್ವಾರ್ಥ, ಭ್ರಷ್ಟಾಚಾರ, ಅನೈತಿಕತೆಯ ವಿರುದ್ಧ ವಚನಗಳ ಮೂಲಕ ಜೀವನಪೂರ್ತಿ ಹೋರಾಡಿದ ಮಹಾನುಭಾವರ ಜೀವನ ನಮಗೆಲ್ಲ ಆದರ್ಶವಾಗಬೇಕು ಎಂದರು.

ಸುಶೀಲಾ ಸೋಮಶೇಖರ್ ಅವರ 'ವಚನ ಧರ್ಮ ವೈವಿಧ್ಯ' ಹಾಗೂ 'ಚಿಂತನಾನುಭವ', ವಿಜಯ ಹಾಸನ್ ಅವರ 'ಶರಣ ಸತಿ ಲಿಂಗಪತಿ' ಕೃತಿಗಳನ್ನು ಹಾಸನ ಮತ್ತು ಕೊಡಗು ಸಾವಯವ ಕೃಷಿಕರ ಪ್ರಾಂತೀಯ ಒಕ್ಕೂಟ ಅಧ್ಯಕ್ಷ ವೈ.ಸಿ. ರುದ್ರಪ್ಪ ಬಿಡುಗಡೆ ಮಾಡಿದರು.

ಪರಿಷತ್ ಜಿಲ್ಲಾಧ್ಯಕ್ಷೆ ಸುಶೀಲಾ ಸೋಮಶೇಖರ್, ಉಪಾಧ್ಯಕ್ಷ ಎನ್.ಎಸ್. ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿಡ್ಡಮ್ಮ ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಲ್. ರಾಮಚಂದ್ರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಕ್ಷ ಡಾ. ಎಂ.ಆರ್. ಚಂದ್ರಶೇಖರ್, ಬಿ.ಆರ್. ಉದಯ್‍ಕುಮಾರ್, ಪಿ.ಎಂ. ಪುಟ್ಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.