ADVERTISEMENT

ಶ್ರವಣಬೆಳಗೊಳ: ಶಿಥಿಲಾವಸ್ಥೆಯತ್ತ ಕಲಾತ್ಮಕ ಗೋಪುರ

ಶ್ರವಣಬೆಳಗೊಳ ಉಭಯ ಬೆಟ್ಟಗಳ ನಡುವೆ ಕಂಗೊಳಿಸುವ ಕಲ್ಯಾಣಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 22:30 IST
Last Updated 27 ನವೆಂಬರ್ 2022, 22:30 IST
ಶ್ರವಣಬೆಳಗೊಳದ ಎರಡೂ ಬೆಟ್ಟಗಳ ನಡುವಿನ ಚಿಕ್ಕದೇವರಾಜ ಒಡೆಯರ್‌ ಕಲ್ಯಾಣಿಯ ವಿಹಂಗಮ ನೋಟ. 
ಶ್ರವಣಬೆಳಗೊಳದ ಎರಡೂ ಬೆಟ್ಟಗಳ ನಡುವಿನ ಚಿಕ್ಕದೇವರಾಜ ಒಡೆಯರ್‌ ಕಲ್ಯಾಣಿಯ ವಿಹಂಗಮ ನೋಟ.    

ಶ್ರವಣಬೆಳಗೊಳ: ವಿಂಧ್ಯಗಿರಿಯಲ್ಲಿ ವಿರಾಜಮಾನರಾಗಿರುವ ವೈರಾಗ್ಯ ಮೂರ್ತಿ ಬಾಹುಬಲಿ ಸ್ವಾಮಿ ಚಂದ್ರಗಿರಿಯಲ್ಲಿ 14 ಬಸದಿಗಳೊಂದಿಗೆ ಬೃಹತ್‌ ಮಾನಸ್ತಂಭದ ವಿಹಂಗಮ ನೋಟ ಒಂದೆಡೆಯಾದರೆ, ಈ ಎರಡೂ ಬೆಟ್ಟಗಳ ನಡುವಿನ ಸುಂದರ ಕಲ್ಯಾಣಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮೈಸೂರು ಮಹಾರಾಜ ಚಿಕ್ಕದೇವರಾಜ ಒಡೆಯರ ಆಳ್ವಿಕೆಯಲ್ಲಿ 17 ನೇ ಶತಮಾನದಲ್ಲಿ ನಿರ್ಮಿಸಿದ್ದರಿಂದ ಚಿಕ್ಕದೇವರಾಜ ಒಡೆಯರ ಕಲ್ಯಾಣಿ ಎಂದು ಕರೆಯಲಾಗುತ್ತದೆ.
ಈ ಕಲ್ಯಾಣಿಯು ದಕ್ಷಿಣದಿಂದ ಉತ್ತರಕ್ಕೆ 107 ಮೀಟರ್‌, ಪೂರ್ವದಿಂದ ಪಶ್ಚಿಮಕ್ಕೆ 176 ಮೀಟರ್‌, ಆಳ 20 ಅಡಿ ಮತ್ತು 586 ಮೀಟರ್‌ ಸುತ್ತಳತೆ ಹೊಂದಿದ್ದು, ಕಲ್ಯಾಣಿಯ ಪ್ರತಿ ದಿಕ್ಕಿನಲ್ಲಿಯೂ 27 ಮೆಟ್ಟಿಲು ಹೊಂದಿದೆ. ಎರಡೂ ಬೆಟ್ಟಗಳ ಮೇಲೆ ನಿಂತು ನೋಡಿದರೆ, ನಯನ ಮನೋಹರವಾಗಿ ಕಂಗೊಳಿಸುತ್ತಿದೆ.

ಈ ಕಲ್ಯಾಣಿ ದಕ್ಷಿಣ ಭಾಗದಲ್ಲಿ ಪ್ರವೇಶ ದ್ವಾರದೊಂದಿಗೆ ಆಕರ್ಷಣೀಯ ಹಾಗೂ ಕಲಾತ್ಮಕವಾದ ಗೋಪುರ ಮತ್ತು ಉತ್ತರ ಭಾಗದಲ್ಲಿ ಸುಂದರವಾದ ಮುಖ ಮಂಟಪವನ್ನು, ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಪ್ರವೇಶ ದ್ವಾರದೊಂದಿಗೆ ಚಿಕ್ಕದಾದ 2 ಗೋಪುರ ಹೊಂದಿದೆ. ದಕ್ಷಿಣ ಭಾಗದ ಗೋಪುರ ಭವ್ಯವಾಗಿದ್ದು, 3 ಹಂತಗಳಾಗಿ ನಿರ್ಮಿಸಲಾಗಿದೆ. ಮೇಲ್ಭಾಗದಲ್ಲಿ 5 ಕಲಶ ಹೊಂದಿದ್ದು, ತೀರ್ಥಂಕರರ, ದ್ವಾರಪಾಲಕರ, ಗಿಳಿಗಳು, ಹಂಸಗಳ ಚಿತ್ರಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ.

ADVERTISEMENT

ಇಂತಹ ಅಪರೂಪದ ಭವ್ಯ ಗೋಪುರಕ್ಕೆ ನಿರ್ವಹಣೆ ಇಲ್ಲದೇ ಸುತ್ತಲೂ ಅರಳಿ ಮರಗಳು ಬೆಳೆಯುತ್ತಿದ್ದು, ಈ ಗೋಪುರ ಶಿಥಿಲಾವಸ್ಥೆಯತ್ತ ಸಾಗಿದೆ. ತಕ್ಷಣ ಹೊಣೆ ಹೊತ್ತಿರುವ ಸ್ಥಳೀಯ ಕ್ಷೇತ್ರದ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಈ ಕಲ್ಯಾಣಿಯ ರಕ್ಷಣೆಗೆ ಕ್ರಮ ಜರುಗಿಸಲು ಗುತ್ತಿಗೆದಾರರಾದ ಎಚ್‌.ಎಂ.ಶಿವಣ್ಣ, ಎಚ್‌.ನಾಗರಾಜು, ಕೂಟಿ ಮಂಜು, ವಿನಂತಿಸಿದ್ದಾರೆ.

ಇನ್ನು ಉತ್ತರಕ್ಕಿರುವ ಮುಖ ಮಂಟಪದಲ್ಲಿ ಹಂಸವಾಹನ, ವೀಣೆ ಹಿಡಿದ ಸರಸ್ವತಿ ದೇವಿ, ಯಕ್ಷಿಯರಾದ ಮಗುವನ್ನು ಕೈಯಲ್ಲಿ ಹಿಡಿದ ಕೂಷ್ಮಾಂಡಿನಿ ದೇವಿ, ಮಹಿಷ ವಾಹನ ಹೊಂದಿದ ಜ್ವಾಲಾಮಾಲಿನಿ, ಕುಕ್ಕುಟೋರಗ ವಾಹನ ಮತ್ತು ಸರ್ಪ ಹೆಡೆ ಹೊಂದಿದ ಪದ್ಮಾವತಿ ದೇವಿಯರ ಕೆತ್ತನೆಗಳು ಆಕರ್ಷಕವಾಗಿದೆ. ಈ ಕಲ್ಯಾಣಿಯನ್ನು 1981ರಲ್ಲಿ ಜರುಗಿದ ಸಹಸ್ರಾಬ್ದಿ ಮಹಾಮಸ್ತಕಾಭಿಷೇಕ ವೇಳೆ ಮತ್ತು 2018ರಲ್ಲಿ ನಡೆದ 88ನೇ ಅಭಿಷೇಕದಲ್ಲಿ ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ಈ ಕಲ್ಯಾಣಿಗೆ ತನ್ನದೇ ಆದಂತಹ ಇತಿಹಾಸವಿದ್ದು, ಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ರಥೋತ್ಸವದ ಸಂದರ್ಭದಲ್ಲಿ ವಿದ್ಯುತ್‌ ದೀಪ, ಮತ್ತು ಪುಷ್ಪಗಳಿಂದ ಅಲಂಕೃತಗೊಂಡ ತೆಪ್ಪದಲ್ಲಿ ನೇಮಿನಾಥ ತೀರ್ಥಂಕರ ಮತ್ತು ಕೂಷ್ಮಾಂಡಿನಿ ದೇವಿ ಪ್ರತಿಷ್ಠಾಪಿಸಿ ತೆಪ್ಪೋತ್ಸವ ನಡೆಸಲಾಗುತ್ತದೆ.

ರಕ್ಷಣೆ ದೃಷ್ಠಿಯಿಂದ ಕಲ್ಯಾಣಿಗೆ ಇಳಿಯಲು ಸುತ್ತಲೂ ತಂತಿಯ ಜಾಲರಿ ಹಾಕಲಾಗಿದೆ. ತೆಪ್ಪೋತ್ಸವ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರೂ ಪಾಲ್ಗೊಳ್ಳುವುದು ವಾಡಿಕೆ. ಮಳೆಗಾಲದಲ್ಲಿ ಕಲ್ಯಾಣಿ ಭರ್ತಿಯಾದಾಗ ಆನೆ, ಕುದುರೆಗಳು ಬಂದು ನೀರು ಕುಡಿಯುತ್ತಿದ್ದವು. ಈ ಸಂಭ್ರಮ ಆಚರಿಸಲು ಒಂದು ತೆಪ್ಪವನ್ನು ಹೂವಿನಿಂದ ಅಲಂಕರಿಸಿ ಕಲ್ಯಾಣಿಯ ಸುತ್ತ ಬರುತ್ತಿದ್ದರು ಎಂದು ಶ್ರಾವಕಿಯರಾದ ಅನಂತಮ್ಮ ಧರಣೇಂದ್ರಯ್ಯ, ದೇವಮ್ಮ ಪದ್ಮಕುಮಾರ್‌ ಹೇಳುತ್ತಾರೆ. ಇಂತಹ ಭವ್ಯ ಇತಿಹಾಸದ ಕಲ್ಯಾಣಿಯನ್ನು ಕಡೆಗಣಿಸದೇ ತುರ್ತು ರಕ್ಷಣೆಯ ಕ್ರಮ ಜರುಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳ ಪುರಾಣ

ಸ್ಥಳ ಪುರಾಣದ ಪ್ರಕಾರ ಎರಡೂ ಬೆಟ್ಟಗಳ ನಡುವಿನ ಈ ಕಲ್ಯಾಣಿಯಿಂದ ಕ್ಷೇತ್ರಕ್ಕೆ ಶ್ರವಣಬೆಳಗೊಳ ಎಂಬ ಹೆಸರು ಬಂದಿದೆ. ಶ್ರವಣ ಎಂದರೆ ಜೈನ ಸನ್ಯಾಸಿ ಎಂದೂ, ಬೆಳಗೊಳ ಎಂದರೆ ಬಿಳಿಯ ಕೊಳ ಎಂದು ಅರ್ಥ ಬರುತ್ತದೆ.

ಕ್ರಿ.ಶ. 981ರ ಮಾರ್ಚ್‌ 13ರಂದು ಬಾಹುಬಲಿ ಮೂರ್ತಿ ನಿರ್ಮಿಸಿದ್ದು, ಚಾವುಂಡರಾಯನ ಅತಿ ಗರ್ವದಿಂದಾಗಿ ಬಾಹುಬಲಿಯ ಪ್ರಥಮ ಮಹಾಮಸ್ತಕಾಭಿಷೇಕ ಅಪೂರ್ಣಗೊಂಡಾಗ ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಯು ಗುಳ್ಳುಕಾಯಜ್ಜಿಯ ರೂಪದಲ್ಲಿ ಬಂದು ಸಣ್ಣ ಗುಳ್ಳದ ಕಾಯಿಯಲ್ಲಿ ಕ್ಷೀರಾಭಿಷೇಕ ಮಾಡಿದಳು. ಅದು ಅಕ್ಷಯವಾಗಿ ಇಡೀ ಬೆಟ್ಟದಿಂದ ಕ್ಷೀರಧಾರೆಯಾಗಿ ಕೆಳಗಿಳಿದು, ಬೆಟ್ಟದ ಬುಡದಲ್ಲಿದ್ದ ಈ ಕೊಳ ಸೇರಿದಾಗ ಅದು ಬಿಳಿ ಕೊಳವಾಯಿತು ಎಂದು ಹೇಳಲಾಗುತ್ತಿದೆ.

ಶಾಸನಗಳಲ್ಲಿ ಇದನ್ನು ಧವಲಸರಸ್‌ ಎಂದು ಉಲ್ಲೇಖಿಸಲಾಗಿದ್ದು, ಧವಲ ಸರೋವರ ಎಂಬ ಹೆಸರು ಕಂಡು ಬರುತ್ತದೆ. ಕ್ರಿ.ಶ. 7ನೇ ಸತಮಾನದಿಂದ 19ನೇ ಶತಮಾನದವರೆಗಿನ ಶಾಸನಗಳಲ್ಲಿ ಬೆಳ್ಗೊಳ ಎಂಬ ಹೆಸರು ಬಳಕೆಯಾಗಿದ್ದು, ಕ್ರಿ.ಶ.1672ರಿಂದ 1704 ರವರೆಗೆ ಆಳ್ವಿಕೆ ಮಾಡಿದ ಮೈಸೂರು ದೊರೆಗಳಾದ ಚಿಕ್ಕದೇವರಾಜ ಒಡೆಯರ್‌ ಕಾಲದಲ್ಲಿ ಈ ಕೊಳಕ್ಕೆ ಸುಂದರವಾದ ಸೋಪಾನಗಳನ್ನು ಕೋಟೆ, ಗೋಪುರಗಳನ್ನು ಪ್ರವೇಶ ದ್ವಾರದೊಂದಿಗೆ ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.