ADVERTISEMENT

ಹಾಸನ: ಅಂಚೆ ಕಚೇರಿಗೆ ಮುತ್ತಿಗೆ: ಬಂಧನ, ಬಿಡುಗಡೆ

ರೈತ ಮುಖಂಡರ ಬಂಧನ ಖಂಡಿಸಿ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 13:07 IST
Last Updated 27 ನವೆಂಬರ್ 2020, 13:07 IST
ಹಾಸನ ಅಂಚೆ ಅಧೀಕ್ಷಕರ ಕಚೇರಿ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಹಾಸನ ಅಂಚೆ ಅಧೀಕ್ಷಕರ ಕಚೇರಿ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದರು.   

ಹಾಸನ: ಕೇಂದ್ರ ಸರ್ಕಾರದ ಕಾರ್ಮಿಕ, ರೈತ ಹಾಗೂ ಜನ ವಿರೋಧಿ ನೀತಿ ವಿರೋಧಿಸಿ ಹಾಗೂ ದೆಹಲಿ ಚಲೊದಲ್ಲಿ
ಭಾಗಿಯಾಗಿದ್ದ ರೈತ ಮುಖಂಡರ ಬಂಧನ ಖಂಡಿಸಿ ಶುಕ್ರವಾರ ನಗರದ ಅಂಚೆ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಲು
ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಅಂಚೆ ಅಧೀಕ್ಷಕರ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರುಅವಕಾಶ ನೀಡಲಿಲ್ಲ. ಬಳಿಕ ಕಚೇರಿ ಎದುರು ಧರಣಿ ಕುಳಿತು ಕೆಲ ಕಾಲ ರಸ್ತೆತಡೆ ನಡೆಸಿದರು. ಇದರಿಂದಾಗಿ ಎನ್‌.ಆರ್‌. ವೃತ್ತದ ವರೆಗೂ ಸಂಚಾರ ದಟ್ಟಣೆ ಉಂಟಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಬಳಿಕ ನಗರ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣರಾಜು, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ‍್ ರಾಘವೇಂದ್ರ ಅವರು
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸಂಚಾರಕ್ಕೆ ಅನುವು ಮಾಡಿದರು.

ADVERTISEMENT

ಇದಕ್ಕೂ ಮುನ್ನ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್‌, ‘ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಪೊಲೀಸರು
ಅವಕಾಶ ಕೊಡದ ಕಾರಣ ರಸ್ತೆತಡೆ ನಡೆಸಿದೆವು. ಹರಿಯಾಣದಲ್ಲಿ ಸಾವಿರಾರು ರೈತ ಮುಖಂಡರನ್ನು ಬಂಧಿಸಲಾಗಿದೆ.
ರೈತರ, ಕಾರ್ಮಿಕರ ಸಮಸ್ಯೆಗಳಿಗೆ ಕೇಂದ್ರ ಸ್ಪಂದಿಸುತ್ತಿಲ್ಲ. ಸಂಸತ್‌ನಲ್ಲಿ ಯಾವುದೇ ಚರ್ಚೆ ಮಾಡದೇ ಮಸೂದೆಗಳನ್ನು ಜಾರಿ ಮಾಡಲಾಗುತ್ತಿದೆ. ದೇಶದ ರೈತರು ಮತ್ತು ಕಾರ್ಮಿಕರು ಗುಲಾಮರಾಗುವ ಹಂತಕ್ಕೆ ತಳ್ಳಲಾಗಿದೆ’ ಎಂದರು ಟೀಕಿಸಿದರು.

ರೈತರ ಭೂಮಿಯನ್ನು ಕಾರ್ಪೋರೆಟ್‌ ಕಂಪನಿಗಳ ಹಿಡಿತಕ್ಕೆ ಅವಕಾಶ ಕೊಡಲಾಗಿದೆ. ಹಾಗಾಗಿ ರೈತರು, ಕಾರ್ಮಿಕರು
ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಯಾವುದೇ ಕಾರಣಕ್ಕೂ ರೈತರು. ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಲು
ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಬಾಬು, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಕಾರ್ಯದರ್ಶಿ ಅರವಿಂದ್‌, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಡಿವೈಎಫ್‌ಐ ಸಂಚಾಲಕ ಮಧುಸೂದನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.