ನುಗ್ಗೇಹಳ್ಳಿ: ಎಸ್.ಎಲ್. ಭೈರಪ್ಪನವರ ಸ್ವಗ್ರಾಮ ಸಂತೇಶಿವರದಲ್ಲಿ ಗುರುವಾರ ಎಲ್ಲೆಡೆಯೂ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿ ಮನೆಯಲ್ಲೂ ತಮ್ಮವರನ್ನೇ ಕಳೆದುಕೊಂಡ ಸಂಕಟ ಮನೆ ಮಾಡಿತ್ತು. ಗ್ರಾಮಸ್ಥರೆಲ್ಲರೂ ಭೈರಪ್ಪನವರನ್ನು ನೆನೆದು ಕಣ್ಣೀರು ಹಾಕಿದರು.
ಭೈರಪ್ಪ ಬಾಲ್ಯದಿಂದ ಬೆಳೆದು ಬಂದಿದ್ದನ್ನು ನೆನೆದು ಕಣ್ಣೀರಿಟ್ಟ ಅವರ ಸಹೋದರ ವೇಣುಗೋಪಾಲ್, ‘ಸಂತೇಶಿವರದಲ್ಲಿ ಅಂತ್ಯಕ್ರಿಯೆ ಮಾಡಬೇಕಿತ್ತು. ಭೈರಪ್ಪನವರ ಆಸೆ ಕೂಡ ಅದೇ ಆಗಿತ್ತು, ಆದರೆ ಅದು ಅಗಲಿಲ್ಲ. ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬಳಿಕ ಭೈರಪ್ಪ ನೀರು ತುಂಬಿಸಿದ ಸಂತೇಶಿವರ ಕೆರೆಯಲ್ಲಿ ಅಸ್ಥಿ ವಿಸರ್ಜಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ಈ ವೇಳೆ ಅಣ್ಣನ ಬಾಲ್ಯವನ್ನು ನೆನೆದು ಸಹೋದರಿ ಕಮಲಾ ಭಾವುಕರಾದರು. ‘ಬಾಲ್ಯದಿಂದಲೂ ಕಷ್ಟದಲ್ಲೇ ಬೆಳೆದ. ವಾರಾನ್ನ ಮಾಡಿ ಕಷ್ಟಪಟ್ಟು ಓದಿದ. ತಾಯಿ, ಅಕ್ಕ, ತಮ್ಮ ಪ್ಲೇಗ್ ಬಂದು ತೀರಿಕೊಂಡರು. ಅಪ್ಪನ ಜೊತೆ ದೇವಾಲಯದಲ್ಲಿ ವಾಸವಿದ್ದ. ಆನಂತರ ತಂದೆ ಲಿಂಗಣ್ಣಯ್ಯ ಸಾವನ್ನಪ್ಪಿದರು’ ಎಂದು ಹೇಳಿದರು.
‘ನಂತರ ಗುಜರಾತನಲ್ಲಿ ಕೆಲಸಕ್ಕೆ ಸೇರಿಕೊಂಡರು. ಆದರೆ ಹುಟ್ಟೂರನ್ನು ಎಂದಿಗೂ ಮರೆಯಲಿಲ್ಲ. ಸಂತೇಶಿವರಕ್ಕೆ ಬಂದಾಗಲೆಲ್ಲಾ ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದ. ಗ್ರಾಮದ ಸಮಸ್ಯೆ ಅರಿತು ಕೆರೆ ತುಂಬಿಸುವ ಕಾರ್ಯ ಮಾಡಿದ. ಗ್ರಾಮಕ್ಕೆ ಬಂದಾಗಲೆಲ್ಲಾ ಎಲ್ಲೆಡೆ ಓಡಾಡುತ್ತಿದ್ರು. ಓದಿದ ಶಾಲೆ, ಈಜು ಕಲಿತ ಕೆರೆ ನೋಡುತ್ತಿದ್ದ. ದೇಶದಲ್ಲೇ ಒಳ್ಳೆಯ ವ್ಯಕ್ತಿಯಾಗಿ ಬೆಳೆದ. ಈ ಸಾವು ಅತೀವ ನೋವು ತಂದಿದೆ. ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಆದರೆ ದೇಶದ ವಿವಿಧೆಡೆಗಳಿಂದ ಸಾವಿರಾರು ಜನರು ಅಂತಿಮ ದರ್ಶನಕ್ಕೆ ಬರುತ್ತಾರೆ. ಇದು ಚಿಕ್ಕ ಗ್ರಾಮ. ಇಲ್ಲಿ ಅಂತ್ಯಕ್ರಿಯೆ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಹೇಳಿದರು.
ಶ್ರದ್ಧಾಂಜಲಿ:
ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರ ನಿಧನಕ್ಕೆ ಹೋಬಳಿ ಕೇಂದ್ರದಲ್ಲಿ ವಿವಿಧ ಸಂಘ– ಸಂಸ್ಥೆಗಳು, ಗ್ರಾಮಸ್ಥರು ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದರು. ಹೋಬಳಿ ಕೇಂದ್ರದ ಪೊಲೀಸ್ ಠಾಣೆ ಮುಂಭಾಗ ನಡೆದ ಸಭೆಯಲ್ಲಿ ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಜಗನ್ನಾಥ್ ಮಾತನಾಡಿ, ‘ಭೈರಪ್ಪನವರು ನಮ್ಮ ತಂದೆ ದಿವಂಗತ ಶ್ರೀನಿವಾಸ್ ಅಯ್ಯಂಗಾರ್ ಅವರ ಶಿಷ್ಯರಾಗಿದ್ದರು. ನಮ್ಮ ತಂದೆಯವರು ಬದುಕಿದ್ದ ಸಂದರ್ಭದಲ್ಲಿ ಅನೇಕ ಬಾರಿ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಬಹಳ ಸರಳವಾದ ವ್ಯಕ್ತಿತ್ವ. ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದರು. ಅವರ ಕೃತಿಗಳು ಕೇವಲ ಭಾರತ ದೇಶವಲ್ಲದೇ ವಿಶ್ವದ ಗಮನ ಸೆಳೆದಿವೆ. ಅವರು ನಮ್ಮ ಹೋಬಳಿಯಲ್ಲಿ ಹುಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ. ಅವರ ಹುಟ್ಟೂರಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಸರ್ಕಾರ ಮಾಡಬೇಕು’ ಎಂದು ಒತ್ತಾಯಿಸಿದರು.
ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಹೋಬಳಿ ಕಸಾಪ ಅಧ್ಯಕ್ಷ ದೊರೆಸ್ವಾಮಿ, ಉಪ ತಹಶೀಲ್ದಾರ್ ಪೂರ್ಣಿಮಾ, ಪಿಎಸ್ಐ ಭರತ್ ರೆಡ್ಡಿ, ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ಮಂಜುನಾಥ್, ವೀರಶೈವ ಮುಖಂಡರಾದ ಕೃಪಾ ಶಂಕರ್, ಜೆ. ಮಾವಿನಹಳ್ಳಿ ಸುರೇಶ್, ಎನ್.ಎಸ್. ಗಿರೀಶ್, ಎನ್.ಸಿ ಉಮೇಶ್, ಆನಂದ್, ಪ್ರದೀಪ್, ಪ್ರಮುಖರಾದ ಎಚ್.ಜೆ.ಕಿರಣ್, ಎನ್.ಜೆ.ಸೋಮನಾಥ್, ಎನ್.ಎಸ್. ಲಕ್ಷ್ಮಣ್, ಎನ್.ಆರ್. ಶಿವಕುಮಾರ್, ಮಹಮದ್ ಜಾವೀದ್, ಎನ್.ಎಸ್. ಪ್ರಕಾಶ್, ವಿಕ್ಟರ್, ನಟರಾಜ್ ಯಾದವ್, ಹೊನ್ನೇಗೌಡ, ಕಿರಣ್ ಗವಿರಂಗಯ್ಯ, ಯಲ್ಲಪ್ಪ, ಮಹೇಶ್, ಅಕ್ಕು, ನಾರಾಯಣಗೌಡ, ಮೆಡಿಕಲ್ ಸಂತೋಷ್, ಬ್ಯಾಂಕ್ ರಾಜು, ರವಿಶಾಚಾರ್, ವಿರುಪಾಕ್ಷ, ಎನ್.ಆರ್. ಚಂದ್ರು, ಗಣೇಶ್, ಜಯ ಕೀರ್ತಿ, ಸೇರಿದಂತೆ ಇತರರು ಹಾಜರಿದ್ದರು.
‘ಅಧ್ಯಯನ ಕೇಂದ್ರದ ಕಟ್ಟಡ ಪೂರ್ಣವಾಗಲಿ’
₹ 5 ಕೋಟಿ ವೆಚ್ಚದಲ್ಲಿ ಸಂತೇಶಿವರ ಗ್ರಾಮದಲ್ಲಿ ನಿರ್ಮಾಣ ಆಗುತ್ತಿರುವ ಎಸ್.ಎಲ್.ಭೈರಪ್ಪ ಕಲೆ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರದ ಕಾಮಗಾರಿ ಶೀಘ್ರ ಪೂರ್ಣವಾಗಲಿ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮಂಜೂರು ಮಾಡಿದ್ದ ಈ ಕೇಂದ್ರ ಮಂಜೂರು ಮಾಡಲಾಗಿತ್ತು. ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ₹ 1 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಅನುದಾನ ಬಿಡುಗಡೆ ಆಗದೇ 6 ತಿಂಗಳಿನಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹೇಳಿದರು. ಅಧ್ಯಯನ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿತ್ತು. ಸರ್ಕಾರ ಇತ್ತ ಗಮನಹರಿಸಬೇಕು. ಇನ್ನಾದರೂ ಉಳಿದ ₹ 4 ಕೋಟಿ ಬಿಡುಗಡೆ ಮಾಡಬೇಕು. ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.