ADVERTISEMENT

ಹಾಸನ: ಮಂದಗತಿಯಲ್ಲಿ ಸಾಗಿರುವ ಕೊಠಡಿ ದುರಸ್ತಿ

ಶಾಲೆಗಳು ಶುರುವಾದರೂ ಮುಗಿಯದ ಕಾಮಗಾರಿ: ವಿದ್ಯಾರ್ಥಿಗಳಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 7:24 IST
Last Updated 15 ಜೂನ್ 2025, 7:24 IST
ಈಚೆಗೆ ಸುರಿದ ಮಳೆಯಿಂದ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಗೋಡೆ ಕುಸಿದಿರುವುದು.(ಸಾಂದರ್ಭಿಕ ಚಿತ್ರ)
ಈಚೆಗೆ ಸುರಿದ ಮಳೆಯಿಂದ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಗೋಡೆ ಕುಸಿದಿರುವುದು.(ಸಾಂದರ್ಭಿಕ ಚಿತ್ರ)   

ಹಾಸನ: ಸರ್ಕಾರಿ ಶಾಲೆಗಳ ಕೊಠಡಿಗಳ ಕೊರತೆ ಹಾಗೂ ಶಿಥಿಲಾವಸ್ಥೆಗೆ ತಲುಪಿದ್ದು, ದುರಸ್ತಿ ಕಾರ್ಯ ಮಂದಗತಿಯಲ್ಲಿ ಸಾಗಿರುವುದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಿ ಪರಿಣಮಿಸಿದೆ.

ಶಾಲೆಗಳ ಶಿಥಿಲಾವಸ್ಥೆಯ ಕುರಿತು ಎಐಡಿಎಸ್‌ಒ ಈಚೆಗೆ ಸಮೀಕ್ಷೆ ನಡೆಸಿತ್ತು. ಅಲ್ಲದೇ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ಈ ವಿಷಯ ತಂದಿದ್ದು, ಇದೀಗ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗಿದೆ. ಆದರೆ, ಕಾಮಗಾರಿಗಳು ಕುಂಟುತ್ತ ಸಾಗಿವೆ.

’ಹಾಸನ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ತಾಲ್ಲೂಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕೊಠಡಿಗಳು ದುರಸ್ತಿ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಹಣ ಬಿಡುಗಡೆಯಾಗಿದ್ದು, ಹಂಹಂತವಾಗಿ ಕಾಮಗಾರಿ ಪ್ರಗತಿಯಲ್ಲಿದೆ‘ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.

ADVERTISEMENT

ಬೆಲೆಯಲ್ಲಿ 2024 -25 ನೇ ಸಾಲಿನ ಒಂದನೇ ಹಂತದ ದುರಸ್ತಿ ಪಟ್ಟಿಯಲ್ಲಿದ್ದ 127 ಕೊಠಡಿಗಳಿಗೆ ₹ 2.32 ಕೋಟಿ ಬಿಡುಗಡೆಯಾಗಿದೆ. ಎರಡನೇ ಹಂತದ ಪಟ್ಟಿಯಲ್ಲಿರುವ 239 ಶಾಲೆಗಳಿಗೆ ₹ 2.92 ಕೋಟಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಸಂಬಂಧಪಟ್ಟ ಏಜೆನ್ಸಿಗಳಿಗೆ ದುರಸ್ತಿ ಕಾರ್ಯಕ್ಕೆ ಬೇಕಾದ ಅಗತ್ಯ ಅನುದಾನವನ್ನು ಜಿಲ್ಲಾ ಪಂಚಾಯಿತಿ ಮೂಲಕ ಪಾವತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

10 ಶೌಚಾಲಯ ನಿರ್ಮಾಣಕ್ಕೆ ₹ 40.8 ಲಕ್ಷ ಬಿಡುಗಡೆಯಾದರೆ, 16 ಹೊಸ ಕೊಠಡಿ ನಿರ್ಮಾಣಕ್ಕೆ ₹ 2.36 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 392 ಕೊಠಡಿ ದುರಸ್ತಿ, ಶೌಚಾಲಯ, ನೂತನ ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗೆ ಒಟ್ಟು ₹ 8 ಕೋಟಿ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಅನುದಾನವನ್ನು ಜಿಲ್ಲಾ ಪಂಚಾಯಿತಿ ಮೂಲಕ ಏಜೆನ್ಸಿಗಳಿಗೆ ಪಾವತಿ ಮಾಡಲಾಗಿದೆ. ಇವುಗಳಲ್ಲಿ ಇದುವರೆಗೂ 56 ಕೊಠಡಿಗಳ ದುರಸ್ತಿ ಮಾತ್ರ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಮಲೆನಾಡು ಭಾಗವಾದ ಸಕಲೇಶಪುರ ತಾಲೂಕಿನ 10 ಪ್ರಾಥಮಿಕ ಶಾಲೆಗಳಿಗೆ ಸೌಚಾಲಯ ನಿರ್ಮಾಣಕ್ಕಾಗಿ 40.8 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ದುರಸ್ತಿ ವಿಳಂಬ: ದುರಸ್ತಿ ಹಾಗೂ ಹೊಸದಾಗಿ ನಿರ್ಮಾಣ ಆಗಬೇಕಾಗಿರುವ ಶಾಲಾ ಕೊಠಡಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಏಜೆನ್ಸಿಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಹಣ ಪಾವತಿ ಮಾಡಲಾಗಿದೆ. ಆದರೂ ಕಾಮಗಾರಿ ವಿಳಂಬವಾಗುತ್ತಿದ್ದು, ಇದರಿಂದ ಕೊಠಡಿಗಳ ದುರಸ್ತಿ ಪ್ರಗತಿ ಕುಂಠಿತವಾಗಿದೆ.

ಜಿಲ್ಲಾ ಪಂಚಾಯಿತಿ ಮೇಲುಸ್ತುವಾರಿ ಮೂಲಕ ಕಾಮಗಾರಿ ಮಾಡಲಾಗುತ್ತಿದ್ದು, ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಹಾಗೂ ಇತರೆ ಕಾರ್ಯ ಚಟುವಟಿಕೆ ವಿಳಂಬದ ಕಾರಣ ದುರಸ್ತಿ ಕಾರ್ಯವು ಕುಂಟುತ್ತ ಸಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲಾ ಪಂಚಾಯಿತಿಯಿಂದ ಸಮರೋಪಾದಿಯಲ್ಲಿ ಅಗತ್ಯ ಅನುಮೋದನೆ ಹಾಗೂ ಏಜೆನ್ಸಿಗಳ ಮೂಲಕ ಸಮರ್ಪಕ ಕಾಮಗಾರಿ ನಿರ್ವಹಣೆ ಮಾಡಿದಲ್ಲಿ, ಕೊಠಡಿ ದುರಸ್ತಿ ಕಾಮಗಾರಿಗಳು ಹಾಗೂ ನೂತನ ಕೊಠಡಿಗಳ ನಿರ್ಮಾಣ ಪೂರ್ಣಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ವಿವೇಕ ಶಾಲೆ ಯೋಜನೆ ಅಡಿ ಅರಸೀಕೆರೆ ತಾಲ್ಲೂಕಿನ 11 ಶಾಲಾ ಕೊಠಡಿ ನಿರ್ಮಾಣಕ್ಕೆ ₹ 1.47 ಕೋಟಿ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಯಾವುದೇ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಉಲ್ಬಣಿಸಿಲ್ಲ.
– ಚಂದ್ರಶೇಖರ್‌ ಪ್ರಭಾರ ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.