ADVERTISEMENT

ಮಣ್ಣಿನ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಿ

ವಿಶ್ವ ಮಣ್ಣು ದಿನಾಚರಣೆಯಲ್ಲಿ ಯೋಜನಾ ನಿರ್ದೇಶಕಿ ಮಂಜುಳಾ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 4:32 IST
Last Updated 6 ಡಿಸೆಂಬರ್ 2022, 4:32 IST
ಹಾಸನದ ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಮಣ್ಣಿನ ಪರೀಕ್ಷೆಯ ಪ್ರಾತ್ಯಕ್ಷಿಕೆ ನಡೆಯಿತು.
ಹಾಸನದ ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಮಣ್ಣಿನ ಪರೀಕ್ಷೆಯ ಪ್ರಾತ್ಯಕ್ಷಿಕೆ ನಡೆಯಿತು.   

ಹಾಸನ: ಕಂದಲಿಯ ಐಸಿಎಆರ್– ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಆತ್ಮ ಯೋಜನೆ, ಕೃಷಿ ಇಲಾಖೆ, ಜುವಾರಿ ಫಾರ್ಮ್ ಹಬ್ ಲಿಮಿಟೆಡ್, ಹಾಗೂ ಎಂ.ಸಿ.ಎಫ್. ಸಹಯೋಗದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ವಿಶ್ವ ಮಣ್ಣು ದಿನವನ್ನು ಆಚರಿಸಲಾಯಿತು.

ಕೃಷಿ ಇಲಾಖೆ ಉಪ ಯೋಜನಾ ನಿರ್ದೇಶಕಿ ಮಂಜುಳಾ, ಮಾತನಾಡಿ, ರೈತರು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಮಣ್ಣಿನ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.

ಜುವಾರಿ ಫಾರ್ಮ್ ಹಬ್ ವ್ಯವಸ್ಥಾಪಕ ಓಂಕಾರಮೂರ್ತಿ, ವಿಶ್ವ ಮಣ್ಣು ದಿನಾಚರಣೆಯ ಮಹತ್ವ, ಹಿನ್ನಲೆ ಮತ್ತು ಈ ವರ್ಷದ ಧ್ಯೇಯವಾಕ್ಯವಾದ ‘ಆಹಾರ ಪ್ರಾರಂಭವಾಗುವುದು ಮಣ್ಣಿನಿಂದ’ ಎಂಬುದರ ಅರ್ಥ ತಿಳಿಸಿಕೊಟ್ಟರು.

ADVERTISEMENT

ಜುವಾರಿ ಫಾರ್ಮ್ ಹಬ್ ಉಪ ವ್ಯವಸ್ಥಾಪಕ ಡಾ.ಮನೋಜ್, ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಮಣ್ಣಿನ ಮಾದರಿ ತೆಗೆಯುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ವಿಜ್ಞಾನಿ ಡಾ. ಶಿವಶಂಕರ್ ಎಂ., ಮಣ್ಣು ಸಕಲ ಜೀವಿಗಳ ಆಧಾರ, ಮಣ್ಣನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣನ್ನು ಕೊಡುಗೆಯಾಗಿ ನೀಡಬೇಕು. ಈ ಮೂಲಕ ಹೆಚ್ಚಿನ ಆಹಾರ ಉತ್ಪಾದನೆಗೆ ಸಹಕಾರಿ ಆಗುವುದು ಎಲ್ಲ ಕರ್ತವ್ಯ ಎಂದು ಹೇಳಿದರು.

ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ನಾಗರಾಜ ಟಿ. ಮಾತನಾಡಿ, ರೈತರು ಕೃಷಿಯಲ್ಲಿ ಖರ್ಚು ಕಡಿಮೆ ಮಾಡಲು ಮಣ್ಣಿನ ಪರೀಕ್ಷೆ ಆಧಾರಿತ ಗೊಬ್ಬರಗಳನ್ನು ಬಳಸಬೇಕು. ಸಮಗ್ರ ಪೋಷಕಾಂಶಗಳ ನಿರ್ವಹಣೆ, ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.

ಕೇಂದ್ರದ ವಿಜ್ಞಾನಿಗಳಾದ ಡಾ.ಪಲ್ಲವಿ ಎನ್., ಡಾ. ಶ್ರೀನಿವಾಸ ದೇಶಪಾಂಡೆ, ಡಾ. ಸಂಕೇತ್ ಸಿ.ವಿ., ಎಂಸಿಎಫ್‌ ಉಪ ವ್ಯವಸ್ಥಾಪಕ ವಿಕ್ರಮ್, ಬೇಸಾಯಶಾಸ್ತ್ರ ತಜ್ಞ ಡಾ. ರಾಜಶೇಖರ್‌, ಜಿಲ್ಲೆಯ ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.

ಕಾಲೇಜು ಮಕ್ಕಳಿಗೆ ಕೃಷಿ ಪಾಠ

ಅರಸೀಕೆರೆಯ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಸೋಮವಾರ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯ ಜಗದ್ಗುರು ಶಿವಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಮಣ್ಣು ದಿನಾಚರಣೆ ಮತ್ತು ಕೃಷಿ ಶಿಕ್ಷಣ ದಿನದ ಬಗ್ಗೆ ಒಂದು ದಿನದ ತರಬೇತಿ ಆಯೋಜಿಸಲಾಗಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಸ್ತರಣಾ ಮುಂದಾಳು ಡಾ.ಚಂದ್ರಶೇಖರ್ ಜಿ.ಎಸ್., ಮಣ್ಣಿನ ಫಲವತ್ತತೆಗಾಗಿ ರಸಾಯನಿಕ ಗೊಬ್ಬರಗಳಿಗಿಂತ ಜೈವಿಕ ಗೊಬ್ಬರಗಳನ್ನು ಬಳಸುವುದು ಸೂಕ್ತ. ಇದರಿಂದ ಮಣ್ಣು ಜೀವಾಣುಗಳಿಂದ ಕೂಡಿದ್ದು, ಆರೋಗ್ಯವಾಗಿರುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಡಾ.ಜಗದೀಶ್ ಎಸ್.ಕೆ., ತೋಟಗಾರಿಕೆ ಬೆಳೆಯಲ್ಲಿ ಮಣ್ಣಿನ ಮಹತ್ವ, ಮಣ್ಣಿನ ಗುಣಧರ್ಮ ಮತ್ತು ವೈವಿಧ್ಯ, ಮಣ್ಣಿನ ಆರೈಕೆ ಕುರಿತು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಡಾ.ಕಿರಣ್ ಕುಮಾರ್ ಕೆ.ಸಿ., ಪಿಯುಸಿ ನಂತರದ ವಿದ್ಯಾರ್ಥಿಗಳಿಗೆ ಕೃಷಿ ಶಿಕ್ಷಣದ ಅಗತ್ಯ, ಪ್ರಾಮುಖ್ಯತೆ, ಉಪಯೋಗ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೃಷಿ ಸಂಬಂಧಿತ ಮಹಾವಿದ್ಯಾಲಗಳ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಈಶ್ವರಯ್ಯ, ಅಧ್ಯಾಪಕರು ಭಾಗವಹಿಸಿದ್ದರು. 300ಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.