ADVERTISEMENT

9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ

ಬಿತ್ತನೆ ಆಲೂಗಡ್ಡೆಯಲ್ಲಿ ಸ್ವಾವಲಂಬನೆಗೆ ಅಂಗಾಂಶ ಕೃಷಿ: ಯೋಗೇಶ್‌

​ಪ್ರಜಾವಾಣಿ ವಾರ್ತೆ
Published 7 ಮೇ 2021, 11:17 IST
Last Updated 7 ಮೇ 2021, 11:17 IST
ಎಚ್‌.ಆರ್‌.ಯೋಗೇಶ್
ಎಚ್‌.ಆರ್‌.ಯೋಗೇಶ್   

ಹಾಸನ: ಬಿತ್ತನೆ ಆಲೂಗಡ್ಡೆಯಲ್ಲಿ ಸ್ವಾವಲಂಬನೆ ಸಾಧಿಸಲು ಅಂಗಾಂಶ ಕೃಷಿ ಅಳವಡಿಸಿಕೊಳ್ಳಲು ನಿರ್ಧರಿಸಿದ್ದು, ಈ ಬಾರಿ 500 ಎಕರೆ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್. ಯೋಗೇಶ್ ತಿಳಿಸಿದರು.

ಜಿಲ್ಲೆಯ 45 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುತ್ತಿದ್ದ ಆಲೂಗಡ್ಡೆ ಕಳಪೆ ಬಿತ್ತನೆ ಬೀಜ, ಬೆಲೆ ಏರಿಕೆ ಹಾಗೂ ಅಂಗಮಾರಿ ಕಾಯಿಲೆಯಿಂದ 9 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಬಿತ್ತನೆ ಬೀಜದಲ್ಲಿ ಉತ್ತರದ ರಾಜ್ಯಗಳನ್ನು ಅವಲಂಬಿಸಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ತೋಟಗಾರಿಕೆ ಇಲಾಖೆ, ಸೋಮನಹಳ್ಳಿ ಕಾವಲು ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ, ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಅಂಗಾಂಶ ಕೃಷಿ ಮೂಲಕ ಬಿಜೋತ್ಪಾದನೆ ನಡೆಸಿದ್ದು, ವರ್ಷ 30 ರೈತರಿಗೆ ಪ್ರಾಯೋಗಿಕವಾಗಿ ಬಿತ್ತನೆ ಬೀಜ ನೀಡಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

ಕುಡಿ ಕಾಂಡ ಸಸಿ ಮೂಲಕ ಆಲೂಗಡ್ಡೆ ಬಿತ್ತನೆ ಮಾಡಬಹುದಾಗಿದೆ. ಒಂದು ಗಿಡದಿಂದ ಅಂದಾಜು 120 ಸಸಿಗಳನ್ನು ಪಡೆಯಬಹುದು. ಇದು ಅತ್ಯಂತ ಪರಿಣಾಮಕಾರಿಯಾಗಿದ್ದು, 2 ಕೋಟಿ ಸಸಿಗಳನ್ನು ಬೆಳೆಯಲಾಗಿದೆ. ಯಾವುದೇ ರೋಗಬಾಧೆ ತಗುಲದೆ ಇರುವುದರಿಂದ ಪ್ರಯೋಜನಕಾರಿ ವಿಧಾನ ಇದಾಗಿದೆ ಎಂದರು.

ADVERTISEMENT

ಮುಂಗಾರು ಹಂಗಾಮಿಗೆ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಅಂಗಾಂಶ ಕೃಷಿಯನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದು, ರೈತರು ಸ್ವಇಚ್ಛೆಯಿಂದ ತೋಟಗಾರಿಕೆ ಇಲಾಖೆ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಒಂದು ಸಸಿಗೆ 50 ರಿಂದ 70 ಪೈಸೆ ಬೆಲೆ ನಿಗದಿಪಡಿಸಲಾಗಿದೆ. ಅಂಗಾಂಶ ಆಲೂಗಡ್ಡೆ ಬಿತ್ತನೆ ಮಾಡುವ ರೈತರಿಗೆ ಪ್ರೋತ್ಸಾಹ ಧನ ಘೋಷಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸೋಮನಹಳ್ಳಿ ಕಾವಲು ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣೆ ಕೇಂದ್ರದ ಮುಖ್ಯಸ್ಥ ಡಾ. ಅಮರ ನಂಜುಂಡೇಶ್ವರ ಮಾತನಾಡಿ, ವಿಯೆಟ್ನಾಂ, ಇಂಡೋನೇಶಿಯಾಗಳಲ್ಲಿ ಈ ಪದ್ಧತಿ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ ಕ್ರಮ ಕೈಗೊಂಡಿದ್ದು ಶಿಮ್ಲಾದಿಂದ ಆಲೂಗಡ್ಡೆ ಸಸಿ ತಂದು ಬಿಜೋತ್ಪಾದನೆ ಮಾಡಲಾಗಿದೆ. ಈ ವರ್ಷ ರೈತರು ತಮ್ಮ ಜಮೀನಿನ ಸ್ವಲ್ಪ ಜಾಗದಲ್ಲಿ ಇದನ್ನು ಬಿತ್ತನೆ ಮಾಡಿದರೆ ಮುಂದಿನ ಹಂಗಾಮಿಗೆ ಬಿತ್ತನೆ ಬೀಜದ ಕೊರತೆಯಿಂದ ಪಾರಾಗಬಹುದು ಎಂದು ಅಭಿಪ್ರಾಯಪಟ್ಟರು.

ಮಾಹಿತಿಗೆ 9481031445, 9449866932 ಇಲ್ಲಿಗೆ ಸಂಪರ್ಕಿಸಲು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.