ADVERTISEMENT

ಸಾ.ರಾ.ಮಹೇಶ್ ಆರೋಪ ಸತ್ಯಕ್ಕೆ ದೂರವಾದುದು: ಸಚಿವ ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 16:24 IST
Last Updated 8 ಜೂನ್ 2020, 16:24 IST
ಎಸ್.ಟಿ. ಸೋಮಶೇಖರ್
ಎಸ್.ಟಿ. ಸೋಮಶೇಖರ್   

ಹಾಸನ: ’ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರದೆ ಎಚ್.ವಿಶ್ವನಾಥ್ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆಂಬ ಸಾ.ರಾ.ಮಹೇಶ್ ಅವರ ಆರೋಪ ಸತ್ಯಕ್ಕೆ ದೂರವಾದುದು. ಸರ್ಕಾರದಲ್ಲಿ ಇನ್ನು ಯಾವ ಅಧಿಕಾರಿಗಳ ವರ್ಗಾವಣೆಗೆ ಚಾಲನೆ ಸಿಕ್ಕಿಲ್ಲ. ಮುಖ್ಯಮಂತ್ರಿ ಗಮನಕ್ಕೆ ಬಾರದೆ ಅದು ಹೇಗೆ ವರ್ಗ ಮಾಡಿಸುತ್ತಾರೆ. ಅರ್ಥವಿಲ್ಲದ ಆರೋಪಗಳೆಲ್ಲಾನಂಬಬೇಕಾ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಿಜೆಪಿ ಸರ್ಕಾರ ರಚನೆಗೆ ನಮ್ಮ ಸಹಕಾರ ಸಾಕಷ್ಟಿದೆ ಎಂದು ಮೂಲ ಬಿಜೆಪಿಗರೇ ಹೇಳುತ್ತಿದ್ದು, ಸರ್ಕಾರದಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಅವರೇ ಬಯಸಿದ್ದಾರೆ. ಕೊಟ್ಟ ಮಾತಿನಂತೆ ಸಿಎಂ ಯಡಿಯೂರಪ್ಪ ಎಲ್ಲರಿಗೂ ನ್ಯಾಯ ಕಲ್ಪಿಸಿದ್ದಾರೆ. ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್, ರೋಷನ್ ಬೇಗ್ ಹಾಗೂ ಎಲ್. ಶಂಕರ್ ಅವರಿಗೆ ಯಾವುದಾದರೂ ಸ್ಥಾನಮಾನ ದೊರೆಯುತ್ತದೆ. ಮುನಿರತ್ನ ಹಾಗೂ ಪ್ರತಾಪ ಗೌಡ ಅವರ ಶಾಸಕ ಸ್ಥಾನದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ಮುನಿರತ್ನ ಕೇಸಿನಿಂದ ಹೊರ ಬಂದಿದ್ದಾರೆ. ಅವರಿಗೂ ಒಳ್ಳೆಯದಾಗುತ್ತದೆ ಎಂದರು.

ಎಂಟಿಬಿ ನಾಗರಾಜ್ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರೊಂದಿಗೆ ನಾವೆಲ್ಲರೂ ಇದ್ದೇವೆ. ಉನ್ನತ ಸ್ಥಾನ ಅವರಿಗೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಬಿಜೆಪಿಯಲ್ಲಿ ಭಿನ್ನಮತ ಎಂಬುದು ಇಲ್ಲವೇ ಇಲ್ಲ. ಆಕಾಂಕ್ಷಿಗಳು ತಮ್ಮ ಅನಿಸಿಕೆಗಳನ್ನು ಹಿರಿಯರ ಬಳಿ ಹೇಳಿಕೊಳ್ಳಲು ಸ್ವಾತಂತ್ರ‍್ಯವಿದೆ. ನಮ್ಮ ಪಕ್ಷದ ಹೈ ಕಮಾಂಡ್ ಬಲಿಷ್ಠವಾಗಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅಂತವರ ಮಾರ್ಗದರ್ಶನದಲ್ಲಿ ಸರ್ಕಾರ ನಡೆಯುತ್ತಿದೆ ಎಂದು ಹೇಳಿದರು.

ಸಿಎಂ ಬಿ.ಎಸ್. ಯಡಿಯೂರಪ್ಪ 18 ವರ್ಷದ ಯುವಕನ ಹಾಗೆ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಪ್ರತಿ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿ, ಸಚಿವರಿಗೆ ಮಧ್ಯರಾತ್ರಿ 1 ಗಂಟೆ ವರೆಗೆ ಫೋನ್‌ ಮಾಡಿ ಮಾಹಿತಿ ಪಡೆದಿದ್ದಾರೆ. ದಿನದ 24 ಗಂಟೆಯೂ ಅವರು ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ದಣಿವರಿಯದ ನಾಯಕ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.