ಬೇಲೂರು: ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗೆಳ ಹರಾಜು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಆಡಳಿತ ಮಂಡಳಿ ಹಾಗೂ ಸದಸ್ಯರು ಕ್ರಮಕೈಗೊಳ್ಳಬೇಕು ಎಂದು ಕರವೇ (ಪ್ರವೀಣ್‌ಶೆಟ್ಟಿ ಬಣ ) ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಸ್. ಭೋಜೇಗೌಡ ಆಗ್ರಹಿಸಿದರು.
ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್‌ರವರಿಗೆ ಗುರುವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು, ಪುರಸಭೆಗೆ ಸೇರಿದ 134 ವಾಣಿಜ್ಯ ಮಳಿಗೆಗಳ ಹರಾಜನ್ನು ಇ- ಪ್ರಕ್ಯೂರ್‌ಮೆಂಟ್ ಮೂಲಕ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಈ ಹರಾಜು ಪ್ರಕ್ರಿಯೆಯಲ್ಲಿ ಕಾಣದ ಕೈಗಳಿಂದ ಹಣದ ದೊಡ್ಡ ದಂಧೆಯೇ ನಡೆಯುತ್ತಿದೆ ಎಂದು ಆರೋಪಿಸಿದರು.
ಒಂದು ಮಳಿಗೆಗೆ ₹5ರಿಂದ ₹6ಲಕ್ಷ ಬೇಡಿಕೆ ಇಡಲಾಗಿದೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಉಳ್ಳವರು ಬೇರೆಯವರ ಹೆಸರಿನಲ್ಲಿ 5ರಿಂದ 6 ಮಳಿಗೆ ಮಾಡಿಕೊಂಡು ಬಾಡಿಗೆ ಕೊಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದ್ದು, ಟೆಂಡರ್ ಪ್ರಕಕ್ರಿಯೆಯಲ್ಲಿ ಅವ್ಯವಹಾರ ನಡೆದರೆ ಸಂಘಟನೆಯಿಂದ ಪತ್ರಿಭಟನೆ ನಡೆಸಲಾಗುವುದು. ಈ ಬಗ್ಗೆ ಎಚ್ಚರ ವಹಿಸಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಕ್ರಮಕ್ಕೆ ಮುಂದಾಗಬೇಕು ಎಂದರು.
ಕರವೇ ಪದಾಧಿಕಾರಿಗಳ ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಮಳಿಗೆಗಳ ಹರಾಜನ್ನು ಪಾರದರ್ಶಕವಾಗಿ ನಡೆಸುತ್ತಿದ್ದೇವೆ. ಇಲ್ಲಿ ಯವುದೇ ಅವ್ಯವಹಾರಕ್ಕೆ ಅವಕಾಶವಿಲ್ಲ. 134 ಮಳಿಗೆಗಳಿಂದ ₹2.84 ಕೋಟಿ ಬಾಡಿಗೆ ಹಣ ಬಾಕಿ ಇದೆ. ಬಾಕಿ ಕಟ್ಟದಿರುವವರು ಹರಾಜಿನಲ್ಲಿ ಭಾಗವಹಸಿಲು ಅವಕಾಶವಿಲ್ಲ. ಬೇ-ಬಾಕಿ ಪ್ರತಿ ನೀಡಿದರೆ ಹರಾಜಿನಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗುವುದು. ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸುಜಯ್‌ಕುಮಾರ್ ಹಾಗೂ ಕರವೇ ಪ್ರಧಾನ ಕಾರ್ಯದರ್ಶಿ ಜಯ ಪ್ರಕಾಶ್, ಪದಾಧಿಕಾರಿಗಳಾದ ದಿನೇಶ್, ನವೀನ್ ಅರುಣ್ ಸಿಂಗ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.