ಹಾಸನ: ರಾಜ್ಯದ ಉಪ ನೋಂದಣಿ ಕಚೇರಿಗಳಲ್ಲಿ ಕೆಲ ತಿಂಗಳಿಂದ ಹೆಚ್ಚುತ್ತಿರುವ ತಾಂತ್ರಿಕ ತೊಂದರೆ, ಸಿಬ್ಬಂದಿ ಕೊರತೆ, ಕಾವೇರಿ-2 ತಂತ್ರಾಂಶದ ನಿರಂತರ ವ್ಯತ್ಯಯಗಳಿಂದ ಬೇಸತ್ತ ಲೇಖನಧಾರಕರು, ದಸ್ತಾವೇಜು ನೋಂದಣಿ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಧರಣಿ ಆರಂಭಿಸಿದ್ದಾರೆ ಎಂದು ಪತ್ರ ಬರಹಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಿಂದ ಎಲ್ಲ ರೀತಿಯ ನೋಂದಣಿ ವ್ಯವಹಾರಗಳು ಸಂಪೂರ್ಣವಾಗಿ ನಿಂತು ಹೋಗಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದರು.
ತಾಂತ್ರಿಕ ಸಮಸ್ಯೆ ಹೆಚ್ಚಾಗಿದ್ದು, ಕಾವೇರಿ-2 ತಂತ್ರಾಂಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಉಪ ನೋಂದಣಿ ಕಚೇರಿಗಳಿಂದ ಹಲವು ಬಾರಿ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಸರ್ವರ್ ಡೌನ್ ಆಗುವುದು, ದಾಖಲೆಗಳನ್ನು ಅಪ್‌ಲೋಡ್ ಮಾಡುವಾಗ ವಿಳಂಬ, ಬಯೋಮೆಟ್ರಿಕ್ ಕಾರ್ಯದಲ್ಲಿ ತೊಂದರೆ, ವೆರಿಫಿಕೇಶನ್ ಸಮಯ ಹೆಚ್ಚಳ ಸೇರಿ ದೈನಂದಿನ ನೋಂದಣಿ ಕಾರ್ಯವೇ ಅಸ್ತವ್ಯಸ್ತಗೊಂಡಿದೆ ಎಂದರು.
ಜನಸಾಮಾನ್ಯರಿಗೆ ಗೃಹ, ಜಮೀನು, ಬಂಡವಾಳ, ಸಾಲ ಹಾಗೂ ಇತರೆ ಆಸ್ತಿ ವ್ಯವಹಾರಗಳಿಗೆ ಅಗತ್ಯವಿರುವ ದಾಖಲೆಗಳ ನೋಂದಣಿ ಸಮಯೋಚಿತವಾಗಿ ನಡೆಯದೇ, ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಕೇವಲ ತಾಂತ್ರಿಕತೆಯಷ್ಟೇ ಅಲ್ಲ, ಸಿಬ್ಬಂದಿ ಕೊರತೆ ಕೂಡ ನೋಂದಣಿ ಕಾರ್ಯದ ವೇಗಕ್ಕೆ ದೊಡ್ಡ ಅಡ್ಡಿಯಾಗಿದೆ. ಒಂದು ಉಪ ನೋಂದಣಿ ಕಚೇರಿಯಲ್ಲಿ ದಿನಕ್ಕೆ ಕನಿಷ್ಠ 70-80 ದಾಖಲೆಗಳು ಬರುತ್ತಿದ್ದರೆ, ಕೇವಲ 2-3 ಸಿಬ್ಬಂದಿಯಷ್ಟೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸರ್ಕಾರ ಪರಿಚಯಿಸಿದ ಹೊಸ ನಿಯಮಗಳು ಹಾಗೂ ಕಡ್ಡಾಯ ಕ್ರಮಗಳು ಪ್ರಾಯೋಗಿಕವಾಗಿಲ್ಲ. ಹೊಸ ನಿಯಮಗಳು ಕೆಲಸದ ಭಾರವನ್ನು ಎರಡು ಪಟ್ಟು ಹೆಚ್ಚಿಸಿವೆ. ಕಾವೇರಿ-2 ದೋಷಪೂರ್ಣ ಸಾಫ್ಟ್‌ವೇರ್‌ನಿಂದ ಕೆಲಸದ ಸಮಯ ವ್ಯರ್ಥವಾಗುತ್ತಿದೆ. ಜನರಿಗೆ ಸೇವೆ ನೀಡುವುದು ಕಷ್ಟವಾಗಿದ್ದು, ತಪ್ಪುಗಳು ಸಂಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಡಿಸೆಂಬರ್ 7ರಂದು ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದ ನಂತರ, ಲೇಖನಧಾರಕರು ಚಳವಳಿ ಚಟುವಟಿಕೆ ಹೆಸರಲ್ಲಿ ಪ್ರತಿಭಟನೆ ಆರಂಭಿಸಲು ನಿರ್ಧರಿಸಿದ್ದಾರೆ. ಡಿಸೆಂಬರ್ 15 ಮತ್ತು 16ರಂದು ರಾಜ್ಯದಾದ್ಯಂತ ಚಳವಳಿ ಚಟುವಟಿಕೆ ನಡೆಸಲಾಗುವುದು ಎಂದರು.
ಕೃಷ್ಣ ತುಳಸಿದಾಸ್, ರೇಖಾ, ರಾಜಮ್ಮ, ತುಳಸಿಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.