ADVERTISEMENT

ಸ್ವಚ್ಚ ಮೇವ ಜಯತೆಗೆ ಚಾಲನೆ

ಅಂತರ್ಜಲ ವೃದ್ಧಿ, ಜಲಸಂರಕ್ಷಣೆಗಾಗಿ ‘ಜಲಾಮೃತ’ ಜಾರಿ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:04 IST
Last Updated 11 ಜೂನ್ 2019, 16:04 IST
ಹಾಸನ ಮಡೆನೂರು ಕೃಷಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌ ಅವರು ಸಸಿ ನೆಟ್ಟರು.
ಹಾಸನ ಮಡೆನೂರು ಕೃಷಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌ ಅವರು ಸಸಿ ನೆಟ್ಟರು.   

ಹಾಸನ: ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಚ ಮೇವ ಜಯತೆ ಹಾಗೂ ಜಲಾಮೃತ ಯೋಜನೆಗಳಿಗೆ ಅಧಿಕೃತವಾಗಿ ಚಾಲನೆ ದೊರೆಕಿದೆ.

ಶಾಂತಿಗ್ರಾಮ ಬಳಿಯ ಮಡೆನೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಉಪಾಧ್ಯಕ್ಷ ಎಚ್.ಪಿ.ಸ್ವರೂಪ್, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಕೆ.ಎನ್.ವಿಜಯ್ ಪ್ರಕಾಶ್, ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಕೃಷಿ ಮಹಾವಿದ್ಯಾಲಯದ ಡೀನ್‍ ದೇವಕುಮಾರ್ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ವೇತಾ ದೇವರಾಜು, ನೀರಿನ ಅಸಮರ್ಪಕ ನಿರ್ವಹಣೆಯಿಂದ ಭೂಮಿ ಬರಿದಾಗುತ್ತಿದೆ. ಈಗಲಾದರೂ ಜಾಗೃತರಾಗಿ ಪ್ರತಿಯೊಬ್ಬರೂ ಜಲ ಸಂರಕ್ಷಣೆ ಹಾಗೂ ಸಾಕ್ಷರತೆಗೆ ನೆರವಾಗಬೇಕು.ಪರಿಸರಕ್ಕೆ ಅಪಾಯ ಎದುರಾಗಿರುವ ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಸಂಯೋಜಿಸಿ, ಜಲಸಂವರ್ಧನೆ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಪ್ರತಿಯೊಂದು ನಗರ, ಪಟ್ಟಣ, ಗ್ರಾಮ ಮತ್ತು ಮನೆಗಳಲ್ಲಿ ಘನ ಹಾಗೂ ದ್ರವ ತ್ಯಾಜ್ಯಗಳ ವ್ಯವಸ್ಥಿತ ನಿರ್ವಹಣೆ ಮೂಲಕ ಪರಿಸರ ಸ್ವಚ್ಚತೆ ಕಾಪಾಡಬೇಕು ಎಂದು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಹಾನಿಯಾಗಿರುವ ಪರಿಸರ ಸರಿಪಡಿಸುವ ಪ್ರಯತ್ನ ಪ್ರಾರಂಭಿಸಬೇಕು. ಸರ್ಕಾರ ಅಂತರ್ಜಲ ವೃದ್ಧಿ ಹಾಗೂ ಜಲಸಂರಕ್ಷಣೆಗಾಗಿ ಜಲಾಮೃತ ಯೋಜನೆ ಜಾರಿಗೆ ತಂದಿದ್ದು, ಸಮುದಾಯದ ಸಹಭಾಗಿತ್ವದೊಂದಿಗೆ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ವಿಜಯ್ ಪ್ರಕಾಶ್ ಮಾತನಾಡಿ, ಜನರ ಮನ ಪರಿವರ್ತನೆಯಿಂದ ಮಾತ್ರ ಬದಲಾವಣೆ ಸಾಧ್ಯ. ನೀರಿನ ಬಗ್ಗೆ ಅರಿವು, ಸಂರಕ್ಷಣೆ, ಹೊಸ ಜಲಮೂಲಗಳ ಸೃಷ್ಠಿ ಮತ್ತು ಹಸಿರು ಹೊದಿಕೆ ಹೆಚ್ಚಿಸಲು ಜಲಾಮೃತ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಜಲ ಸುಸ್ಥಿರತೆಗೆ ಅರಣ್ಯೀಕರಣವನ್ನು ಸಾಮೂಹಿಕ ಆಂದೋಲನವಾಗಿ ಮಾಡಬೇಕು. ಮುಂದಿನ ತಿಂಗಳು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಹಂತದಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು, ಸ್ವಚ್ಚತೆ ವಾತಾವರಣ ನಿರ್ಮಾಣ ಮಾಡಬೇಕಿದೆ. ಎಂದರು.

ಉಪವಿಭಾಗಾದಿಕಾರಿ ಎಚ್.ಎಲ್.ನಾಗರಾಜ್ ಮಾತನಾಡಿ, ಅಂತರ್ಜಲ ಸಂರಕ್ಷಣೆ, ಕೆರೆಗಳ ಪುನಶ್ಚೇತನ ಹಾಗೂ ಜಲ ಮರು ಪೂರಣಕ್ಕೆ ಜಲಾಮೃತ ಯೋಜನೆ ವರದಾನವಾಗಿದೆ. ಈಗಾಗಲೇ ಅನೇಕ ಕೆರೆಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರತಿ ಗ್ರಾಮದಲ್ಲಿ ಸಾರ್ವಜನಿಕರು ಈ ಕಾರ್ಯದಲ್ಲಿ ತೊಡಗಿ ಭೂ ದೇವಿಗೆ ತಮ್ಮ ಕೊಡುಗೆ ನೀಡಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಿಂಗೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಹನುಮೇಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ಅವರು ಜಲ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಚತೆ ಬಗ್ಗೆ ಮಾತನಾಡಿದರು.

ಇದೇ ವೇಳೆ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆ ಪ್ರತಿಜ್ಞಾ ವಿಧಿ ಬೋಧಿಸಿ, ಬಿತ್ತಿಚಿತ್ರ ಬಿಡುಗಡೆಗೊಳಿಸಲಾಯಿತು.

ಗಿರೀಶ್ ಕಾರ್ನಾಡ್ ಅವರ ಗೌರವಾರ್ಥ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಅರುಣ್ ಕುಮಾರ್, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.