ADVERTISEMENT

ತರಳಬಾಳು ಹುಣ್ಣಿಮೆ: ಹಳೇಬೀಡಿನಲ್ಲಿ ನಡೆದಿತ್ತು ಎರಡನೇ ಮಹೋತ್ಸವ

ಎರಡನೇ ಬಾರಿಗೆ ಆತಿಥ್ಯ ವಹಿಸಲು ಸಿದ್ಧವಾಗುತ್ತಿದೆ ಹೊಯ್ಸಳರ ನಗರಿ

ಎಚ್.ಎಸ್.ಅನಿಲ್ ಕುಮಾರ್
Published 29 ಜನವರಿ 2020, 19:30 IST
Last Updated 29 ಜನವರಿ 2020, 19:30 IST
ಹಳೇಬೀಡಿನಲ್ಲಿ ನಡೆದ ಎರಡನೇ ತರಳಬಾಳು ಹುಣ್ಣಿಮೆ ಮಹೋತ್ಸವದ ಸಾನ್ನಿಧ್ಯವಹಿಸಿದ್ದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ.
ಹಳೇಬೀಡಿನಲ್ಲಿ ನಡೆದ ಎರಡನೇ ತರಳಬಾಳು ಹುಣ್ಣಿಮೆ ಮಹೋತ್ಸವದ ಸಾನ್ನಿಧ್ಯವಹಿಸಿದ್ದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ.   

ಹಳೇಬೀಡು: ಇಲ್ಲಿ ನಡೆಯಲಿರುವ 70ನೇ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗ್ರಾಮದ ಹಿರಿಯರ ಬಾಯಲ್ಲಿ ಅದರ ಮಾತುಗಳೇ ಕೇಳಿಬರುತ್ತಿವೆ.

ಈ ಹಿಂದೆ ಹಳೇಬೀಡಿನಲ್ಲಿ 1951ರಲ್ಲಿ ಸಿರಿಗೆರೆ ಮಠದ ಅಂದಿನ ಗುರುಗಳಾದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯದಲ್ಲಿ ನಡೆದಿದ್ದ 2ನೇ ತರಳಬಾಳು ಹುಣ್ಣಿಮೆ ಮಹೋತ್ಸವದ ಸ್ವಾರಸ್ಯವನ್ನು ಹಿರಿಯರು ಮೆಲುಕುಹಾಕಿದ್ದಾರೆ.

ತೆಂಗಿನ ಸೋಗೆ ಚಪ್ಪರ, ಬಾಳೆ ಕಂದು, ಮಾವಿನ ತೋರಣಗಳಿಂದ ಊರನ್ನು ಸಿಂಗರಿಸಲಾಗಿತ್ತು. ಅಂದಿನ ಕಾಲದಲ್ಲಿ ಸಾರಿಗೆ ಸೌಲಭ್ಯದ ಕೊರತೆಯಿಂದ ದೂರದಿಂದ ಭಕ್ತರು ಮಹೋತ್ಸವಕ್ಕೆ ಆಗಮಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಹಾಗಾಗಿ ಈಗಿನಂತೆ ಲಕ್ಷಾಂತರ ಜನ ಭಾಗವಹಿಸಿರಲಿಲ್ಲ. 9 ದಿನದಲ್ಲಿ 25000ಕ್ಕೂ ಹೆಚ್ಚು ಮಂದಿ ಬಂದು ಹೋಗಿದ್ದರು.ಊರು ಚಿಕ್ಕದಾಗಿದ್ದರಿಂದ ಕಾಲಿಡಲು ಸ್ಥಳಾವಕಾಶ ಇರಲಿಲ್ಲ. ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಸುತ್ತಮುತ್ತಲಿನ ಗ್ರಾಮದಿಂದ ಎತ್ತಗಾಡಿ ಕಟ್ಟಿಕೊಂಡು ಸಾಕಷ್ಟು ಜನ ಬಂದು ಕಾರ್ಯಕ್ರಮ ಕಣ್ತುಂಬಿಕೊಂಡು ತಮ್ಮೂರಿಗೆ ಹಿಂದಿರುಗುತ್ತಿದ್ದರು ಎನ್ನುತ್ತಾರೆ 93ರ ಪ್ರಾಯದ ಎಚ್‌.ಎನ್‌.ಟಿ.ಚನ್ನಪ್ಪ.

ADVERTISEMENT

ಕಲ್ಮಠದ ಮಲ್ಲೇಶ್ವರ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ಚಿಕ್ಕಣ್ಣಗೌಡ, ದೊಡ್ಡಮನೆ ಚನ್ನೇಗೌಡ, ಹೆಬ್ಬಾಳ್ ಬಸಪ್ಪ, ಮಲ್ಲೇಗೌಡ, ನೇರ್ಲಿಗೆ ಕರಿಬಸಪ್ಪ, ಗುರುಬಸವಯ್ಯ, ಭದ್ರಶೆಟ್ಟಿ, ರುದ್ರಶೆಟ್ಟಿ, ನಂಜಪ್ಪಶೆಟ್ಟಿ ಮೊದಲಾದವರು ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು ಎಂದು 94 ವರ್ಷದ ನೇರ್ಲಿಗೆ ಬಸವರಾಜಪ್ಪ ಸ್ಮರಿಸಿದ್ದಾರೆ.

‘ಅಂದಿನ ಕಾಲದಲ್ಲಿ ಜನರು ಹಿರಿಯರು ಹೇಳಿದ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಜಾವಗಲ್‌ ರಸ್ತೆ ಬದಿಯ ಇದ್ದ ವಿಸ್ತಾರವಾದ ಗದ್ದೆಯಲ್ಲಿ ದಾಸೋಹ ಮಾಡಲಾಗಿತ್ತು. ದ್ವಾರಸಮುದ್ರ ಕೆರ ಭರ್ತಿಯಾಗಿದ್ದರಿಂದ ನೀರಿಗೆ ಕೊರತೆ ಇರಲಿಲ್ಲ. ಗದ್ದೆ ಪಕ್ಕದ ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಕೈ ಕಾಲು ತೊಳೆಯುವುದಲ್ಲದೆ ಸ್ನಾನವನ್ನು ಮಾಡುತ್ತಿದ್ದರು. ನೂರಾರು ಎತ್ತಿಗಾಡಿಗಳಲ್ಲಿ ಬಾಳೆ, ಕಂದು ತೆಂಗಿನ ಸೋಗೆ ತಂದು ರಾಶಿಹಾಕುತ್ತಿದ್ದರು. ಬಿದ್ದುಹೋದ ಅಡಿಕೆ ಮರಗಳನ್ನು ತಂದು ನೆಟ್ಟು ಬಿಳಿಯ ಬಟ್ಟೆ ಸುತ್ತಿ, ಮರದ ಅರ್ಧಭಾಗಕ್ಕೆ ಕಾವಿಬಣ್ಣ ಬಳಿಯಲಾಗಿತ್ತು. ಕೂಲಿ ಕಾರ್ಮಿಕರ ಅವಲಂಬನೆಗಿಂತ ಸ್ವಯಂಪ್ರೇರಿತರಾಗಿ ಭಕ್ತರು ಕೆಲಸ ಮಾಡುತ್ತಿದ್ದರು ಎಂದು 84ರ ಎಚ್‌.ಎಂ.ಮಹೇಶ್ವರಪ್ಪ ನೆನಪು ಮಾಡಿಕೊಂಡರು.

*
ಗೋಷ್ಠಿಗಳು ಸ್ವಾಮೀಜಿಗಳ ಆಶೀರ್ವಚನ ಮುಗಿದ ನಂತರ ನಾಟಕ ನಡೆಯುತ್ತಿತ್ತು. ನಾನು ಕುರುಕ್ಷೇತ್ರ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿದ್ದೆ, ಸಂಭಾಷಣೆ ಈಗಲೂ ನೆನಪಿದೆ.
-ಎಚ್‌.ಎನ್‌.ಟಿ.ಚನ್ನಪ್ಪ

*
ಶಿವಕುಮಾರ ಸ್ವಾಮೀಜಿಗಳಿಗೆ ತಟ್ಟೆಭರ್ತಿ ಬೆಳ್ಳಿ ನಾಣ್ಯಗಳನ್ನು ಗುರುಕಾಣಿಕೆಯಾಗಿ ಸಮರ್ಪಿಸಿದಾಗ ಶ್ರೀಗಳು ಒಂದು ನಾಣ್ಯವನ್ನು ಮಾತ್ರ ಪಡೆದು ಭಕ್ತರಿಗೆ ಹಿಂದಿರುಗಿಸಿದ್ದರು.
ನೇರ್ಲಿಗೆ ಬಸವರಾಜಪ್ಪ

*
ಎತ್ತಿನ ಗಾಡಿಗಳಲ್ಲಿ 15 ರಿಂದ 20 ಕಿ.ಮೀ ದೂರದ ಹಳ್ಳಿಗಳಿಂದ ಅಕ್ಕಿ ಮೂಟೆ ತರಲು ರಾತ್ರಿಯಿಡಿ ಪ್ರಯಾಣ ಮಾಡಿದ್ದೇವು.
-ಎಚ್‌.ಎಂ.ಮಹೇಶ್ವರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.