ಹಾಸನ: ತಾಲ್ಲೂಕಿನ ಹೆಚ್ಚುವರಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ನಗರದ ಬಿಇಒ ಕಚೇರಿ ಎದುರು ಶಿಕ್ಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದ ಶಿಕ್ಷಕರು, ಇಲಾಖೆಯ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಿಕ್ಷಕ ಜಯರಾಮ್ ಮಾತನಾಡಿ, ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇಲಾಖೆ ತೆಗೆದುಕೊಂಡ ನಿರ್ಧಾರದಿಂದ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ತಾಲ್ಲೂಕಿನಲ್ಲಿ ನೂರಾರು ಹೆಚ್ಚುವರಿ ಶಿಕ್ಷಕರಿದ್ದಾರೆ. 300ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇನ್ನೂ ಕೆಲ ಹುದ್ದೆಗಳನ್ನು ರದ್ದು ಮಾಡಲಾಗಿದೆ. ಶಿಕ್ಷಕಿಯರಿಗೆ ಅನುಕೂಲ ಆಗುವಂತೆ ಹುದ್ದೆಗಳನ್ನು ಸ್ಥಳೀಯವಾಗಿ ನೀಡಿದರೆ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ನಮ್ಮನ್ನು ಹೊರ ತಾಲ್ಲೂಕಿಗೆ ವರ್ಗ ಮಾಡಿದರೆ, ಕುಟುಂಬ ಹಾಗೂ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬಿಇಒ ಹಾಗೂ ಹಿರಿಯ ಅಧಿಕಾರಿಗಳು, ಮಧ್ಯಪ್ರವೇಶಿಸಿ, ಹೆಚ್ಚುವರಿ ಶಿಕ್ಷಕರಿಗೂ ತಾಲ್ಲೂಕು ವ್ಯಾಪ್ತಿಯಲ್ಲೇ ಹುದ್ದೆ ನೀಡಬೇಕು. ಇಲ್ಲದಿದ್ದರೆ ನಾವು ಕೌನ್ಸೆಲಿಂಗ್ ಬಹಿಷ್ಕಾರ ಮಾಡುತ್ತೇವೆ. ಇದರ ಹೊಣೆ ಇಲಾಖೆಯವರೇ ಹೊರಬೇಕಾಗುತ್ರದೆ ಎಂದು ಎಚ್ಚರಿಕೆ ನೀಡಿದರು.
ಶಿಕ್ಷಕರಾದ ಪರಮೇಶ್, ಚೈತ್ರಾ ಮಂಜೇಗೌಡ, ಕಲ್ಲಹಳ್ಳಿ ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ವಯಸ್ಸಾದವರು ಹಲವು ವರ್ಷಗಳಿಂದ ಕುಟುಂಬದೊಂದಿಗೆ ವಾಸ ದೂರದ ಊರಿಗೆ ವರ್ಗ ಮಾಡುವ ಇಲಾಖೆಯ ತೀರ್ಮಾನ ಸರಿಯಲ್ಲ
50 ವರ್ಷ ಮೇಲಿನ ಶಿಕ್ಷಕರನ್ನು ಬೇರೆಡೆಗೆ ವರ್ಗ ಮಾಡುವ ಇಲಾಖೆಯ ನಿರ್ಧಾರ ಸರಿಯಲ್ಲ. ತಾಲ್ಲೂಕಿನಲ್ಲಿಯೇ ನಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು.
- ಹಿರಿಯ ಶಿಕ್ಷಕ ಅಣ್ಣೇಗೌಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.