ಸಾಂದರ್ಭಿಕ ಚಿತ್ರ
ಹಾಸನ: ಅರಕಲಗೂಡು ತಾಲ್ಲೂಕಿನ ಮರಿತಮ್ಮನಹಳ್ಳಿ ಬಳಿ ಇಂಗ್ಲಿಷ್ ಶಿಕ್ಷಕ ಲೋಕೇಶ್ (42) ಜುಲೈ 15ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಎಸ್‌ಡಿಎಂಸಿ ಅಧ್ಯಕ್ಷರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ಮಂಜುಳಾ ದೂರು ನೀಡಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ನರಸಿಂಹ ನಾಯಕ ನಗರದ ಲೋಕೇಶ್, ಯಲಗತವಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಂದು ಬೆಳಿಗ್ಗೆ ಬೈಕ್‌ನಲ್ಲಿ ಶಾಲೆಗೆ ಹೋಗಿದ್ದು, ಮಧ್ಯಾಹ್ನ ಕರೆ ಮಾಡಿ, ಯೋಗಕ್ಷೇಮ ವಿಚಾರಿಸಿದ್ದರು. ಸಂಜೆ ಕರೆ ಮಾಡಿದರೆ, ಸ್ವೀಕರಿಸಲಿಲ್ಲ. ಮರುದಿನ ಬೆಳಿಗ್ಗೆ ಅರಕಲಗೂಡು ಪೊಲೀಸರು ಕರೆ ಮಾಡಿ, ಲೋಕೇಶ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶವಾಗಾರದಲ್ಲಿದ್ದ ಪತಿ ಶವ ಕಂಡು, ಸಾವಿನ ಬಗ್ಗೆ ಅನುಮಾನ ಇತ್ತು. ಹೀಗಾಗಿ ಅರಕಲಗೂಡು ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ಮಾಹಿತಿ ಕಲೆ ಹಾಕಿದಾಗ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಂಜು ಎಂಬುವವರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಲೋಕೇಶ್ ಅವರು ಶಾಲೆಗೆ ತಡವಾಗಿ ಬಂದರೆ ಬಯ್ಯುವುದು, ಶಾಲೆಯ ಗೇಟ್ ಮುಂದೆ ನಿಲ್ಲಿಸುವುದು, ತರಗತಿ ನಡೆಯುತ್ತಿರುವಾಗಲೇ ಕೊಠಡಿಗೆ ಬಂದು ಕುರ್ಚಿ ಹಾಕಿಕೊಂಡು ಕೂರುವುದು ಸೇರಿದಂತೆ ಮಂಜು ನಿರಂತರ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಲೋಕೇಶ್ ಆಪ್ತರ ಬಳಿ ಹೇಳಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜುಲೈ 15ರಂದು ಶಾಲೆ ಮುಗಿದ ನಂತರ ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಶಾಲೆ ಮುಖ್ಯ ಶಿಕ್ಷಕ ನೀಲಕಂಠ ಸೇರಿ ಓಡನಹಳ್ಳಿಯಲ್ಲಿ ಮದ್ಯಪಾನ ಮಾಡಿದ್ದಾರೆ. ಲೋಕೇಶ್ ಅವರನ್ನು ಮಂಜು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯೇ ಮಲಗಿದ್ದರು. ಈ ವೇಳೆ ಮಂಜು ಅವಮಾನ ಮಾಡಿದ್ದು, ಇದರಿಂದ ಬೇಸತ್ತು ನೇಣು ಹಾಕಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.