ADVERTISEMENT

ಲಕ್ಷ್ಮಿ ಜನಾರ್ದನ ಸ್ವಾಮಿ ದೇ‌ಗುಲ ಜೀರ್ಣೋದ್ಧಾರ

ಹಳೇ ಪಾಳ್ಯದಲ್ಲಿ ಮನೆ ಮಾಡಿದ್ದ ಸಡಗರ, ಸಹಸ್ರಾರು ಭಕ್ತರು ಭಾಗಿ; ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 12:01 IST
Last Updated 4 ನವೆಂಬರ್ 2019, 12:01 IST
ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದ ಲಕ್ಷ್ಮಿ ಜನಾರ್ಧನ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಉದ್ಘಾಟಿಸಿದರು
ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದ ಲಕ್ಷ್ಮಿ ಜನಾರ್ಧನ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಉದ್ಘಾಟಿಸಿದರು   

ಆಲೂರು: ತಾಲ್ಲೂಕಿನ ಹಳೆ ಪಾಳ್ಯ ಗ್ರಾಮದಲ್ಲಿ ಸುಮಾರು 1200 ವರ್ಷಗಳ ಇತಿಹಾಸವಿರುವ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ, ಮಹಾಸಂಪ್ರೋಕ್ಷಣಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಇಡೀ ಗ್ರಾಮ ತಳಿರು, ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೇ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಯಿತು.

ಇದೇ ಸಂದರ್ಭದಲ್ಲಿ ನಡೆದ ವಿಮಾನಗೋಪುರ ಕಳಸಾರೋಹಣ ವನ್ನು ಮೈಸೂರಿನ ಸರ್ಕಾರಿ ಮಹಾರಾಜ ಪಾಠ ಶಾಲೆಯ ವೇದಾಂತ ಪ್ರಾಧ್ಯಾಪಕ ಸತ್ಯನಾರಾಯಣ್ ನೆರವೇರಿಸಿದರು. ನಂತರ ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ದೇವಾಲಯದ ಪ್ರಧಾನ ಅರ್ಚಕ ವಿದ್ವಾನ್ ಹರ್ಷ ನೇತೃತ್ವದಲ್ಲಿ ನಡೆಯಿತು.

ADVERTISEMENT

ಎಚ್‌.ಡಿ.ದೇವೇಗೌಡರು ಭೇಟಿ: ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ’ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿನ ದೇವಾಲಯಗಳ ನಿರ್ಮಾಣ ಮತ್ತು ಪುನರ್ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿರುವುದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ. ದೇವಾಲಯದ ನಿರ್ಮಾಣದ ಜೊತೆಗೆ ಎಲ್ಲರೂ ತಮ್ಮ ಅಂತರಾತ್ಮದೊಳಗೆ ಒಳ್ಳೆಯ ಭಾವನೆಗಳನ್ನು ರೂಡಿಸಿಕೊಂಡಲ್ಲಿ ಶಾಂತಿ- ನೆಮ್ಮದಿ ಪ್ರಾಪ್ತಿಯಾಗುತ್ತದೆ‘ ಎಂದು ಅಭಿಪ್ರಾಯಪಟ್ಟರು.

ಪಾಳ್ಯ ಗ್ರಾಮದಲ್ಲಿರುವ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಇನ್ನೂ ಪೂರ್ಣವಾಗಿಲ್ಲ. ಇದನ್ನು ಪೂರ್ಣಗೊಳಿಸಲು ಇನ್ನೂ ಕೋಟಿಗಟ್ಟಲೇ ಹಣಬೇಕಾಗುತ್ತದೆ. ಅದರಿಂದ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಿ ಅನುದಾನ ಕೊಡಿಸುತ್ತೇನೆ ಜೊತೆಗೆ ನಾನು ವೈಯುಕ್ತಿವಾಗಿ 2 ಲಕ್ಷ ಹಣವನ್ನು ಜೀರ್ಣೋದ್ಧಾರ ಕಾರ್ಯಕ್ಕೆ ಕೊಡುತ್ತೇನೆ ಎಂದು ಘೋಷಿಸಿದರು.

ಪ್ರಸಾದ ವಿನಿಯೋಗ: ಗ್ರಾಮದ ದೇವಾಲಯದ ಆವರಣದಲ್ಲೇ ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ಪ್ರಸಾದ್ ಸ್ವೀಕರಿಸಿದರು. ಯುವಕರು ಸಮವಸ್ತ್ರ ಧರಿಸಿ ಪ್ರಸಾದ ವಿನಿಯೋಗ ಮಾಡಿದರು.

ವೇದೀಕೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ, ಪಾಳ್ಯ ಗ್ರಾ.ಪಂ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಕಲ್ಯಾಣಕುಮಾರ್, ಜಿಲ್ಲಾ ಎಪಿಎಂಸಿ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ತಹಶೀಲ್ದಾರ್ ಶರೀನ್ ತಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲಾ, ತಾ.ಪಂ ಸದಸ್ಯ ಸಿ.ವಿ ಲಿಂಗರಾಜು, ಧರ್ಮಸ್ಥಳ ಟ್ರಸ್ಟ್‌ ಹರಿರಾಮ್ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ಪಿ.ಲೆ.ನಿಂಗರಾಜ್, ವೆಂಕಟಸುಬ್ಬಯ್ಯ, ಬೀರೇಗೌಡ, ಪಿ.ಎಲ್ ನಟರಾಜ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.