ADVERTISEMENT

ಫಸಲ್ ಬಿಮಾಗೆ ಕಾಫಿ ಸೇರಿಸಿ: ಕರ್ನಾಟಕ ಬೆಳೆಗಾರರ ಒಕ್ಕೂಟ

ಅಕಾಲಿಕ ಮಳೆ, ಕೊಳೆರೋಗ: ವ್ಯಾಪಕ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:51 IST
Last Updated 26 ಜೂನ್ 2025, 13:51 IST
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಕಾಫಿ ತೋಟಗಳಲ್ಲಿ ಕಂಡುಬಂದ ದೃಶ್ಯ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಕಾಫಿ ತೋಟಗಳಲ್ಲಿ ಕಂಡುಬಂದ ದೃಶ್ಯ.   

ಹಾಸನ: ಅಕಾಲಿಕ ಮಳೆಯಿಂದಾಗಿ ಕಾಫಿ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವ ಮೂಲಕ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಸುರೇಂದ್ರ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಜೂನ್ 15-20 ರಿಂದ ವಾಡಿಕೆಯಂತೆ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭಗೊಂಡಿದ್ದು, ಕಾಫಿ ಬೆಳೆಗಾರರಿಗೆ ಸಕಾಲದಲ್ಲಿ ತೋಟದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿಲ್ಲ ಎಂದರು.

35 ರಿಂದ 40 ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು, ತೇವಾಂಶದ ವಾತಾವರಣ ನಿರ್ಮಾಣವಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಕಾಫಿ ಗಿಡಗಳಿಗೆ ಕೊಳೆರೋಗ ಕಾಣಿಸಿಕೊಂಡಿದೆ ಎಂದರು.

ADVERTISEMENT

ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆಯಾಗಿರುವುದು ಕಾಫಿ ಬೆಳೆಗೆ ಮಾರಕವಾಗಿದೆ. ಸುಮಾರು ಶೇ 33 ರಷ್ಟು ಕಾಫಿ ಕೊಳೆತು ಉದುರಿದೆ. ಇದೇ ರೀತಿ ಮಳೆ ಮುಂದುವರಿದರೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದ್ದು, ಸರ್ಕಾರ ಕೂಡಲೇ ಬೆಳೆಗಾರರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಪಶ್ಚಿಮ ಘಟ್ಟ ಭಾಗದ ಕಾಫಿ ಬೆಳೆಗಾರರಿಗೆ ಮಳೆಯ ಕುರಿತು ನಿಖರ ಮಾಹಿತಿಯನ್ನು ಹವಾಮಾನ ಇಲಾಖೆ ಒದಗಿಸಬೇಕು. ಕಾಫಿ ಬೆಳೆಯನ್ನು ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಕಾಫಿ ಉದ್ಯಮದಿಂದ ದೇಶದ ಆರ್ಥಿಕತೆಗೆ ಸುಮಾರು ₹ 15 ಸಾವಿರ ಕೋಟಿಯಷ್ಟು ಕೊಡುಗೆ ನೀಡುತ್ತಿದೆ. ಇದೀಗ ಅಕಾಲಿಕ ಮಳೆ ಕಾರಣ ಸಂಕಷ್ಟಕ್ಕೆ ಈಡಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಫಸಲ್ ಬಿಮಾ ಯೋಜನ ವ್ಯಾಪ್ತಿಗೆ ಕಾಫಿ ಸೇರಿಸಬೇಕು. ಈಗಾಗಲೇ ಕಾಳುಮೆಣಸು, ಅಡಿಕೆ ಫಸಲ್ ಬಿಮಾ ವ್ಯಾಪ್ತಿಗೆ ಸೇರಿದ್ದು, ವಿಮಾ ಕಂತು ಕಟ್ಟಲು ಮತ್ತಷ್ಟು ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಪ್ಲಾಂಟರ್ಸ್‌ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್. ಪರಮೇಶ್, ಗೌರವ ಕಾರ್ಯದರ್ಶಿ ಕೆ.ಬಿ. ಲೋಹಿತ್, ಸಚಿನ್, ಮೇಘರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.