ADVERTISEMENT

ಆಲೂರು: ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆ ಹಿಂಡು

ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಒಳಗಾದ ರೈತರು: ಆನೆ ಸ್ಥಳಾಂತರಕ್ಕೆ ಒತ್ತಾಯ

ಎಂ.ಪಿ.ಹರೀಶ್
Published 12 ಜೂನ್ 2025, 5:27 IST
Last Updated 12 ಜೂನ್ 2025, 5:27 IST
ಆಲೂರು ತಾಲ್ಲೂಕಿನಲ್ಲಿ ಭತ್ತದ ಗದ್ದೆಗಳಿಗೆ ಕಾಡಾನೆಗಳು ನುಗ್ಗಿದ್ದರಿಂದ ಬೆಳೆ ಹಾಳಾಗಿದೆ.        
ಆಲೂರು ತಾಲ್ಲೂಕಿನಲ್ಲಿ ಭತ್ತದ ಗದ್ದೆಗಳಿಗೆ ಕಾಡಾನೆಗಳು ನುಗ್ಗಿದ್ದರಿಂದ ಬೆಳೆ ಹಾಳಾಗಿದೆ.           

ಆಲೂರು: ಕಾಡಾನೆಗಳ ಹಿಂಡು ಸೇರಿಕೊಂಡಿರುವ ಬೇಲೂರು ತಾಲ್ಲೂಕಿನ ಗಡಿ ಪ್ರದೇಶವಾದ ತಾಲ್ಲೂಕಿನ ಪಾಳ್ಯ ಹೋಬಳಿಗೆ ಸೇರಿದ ಹಲವು ಗ್ರಾಮಗಳಲ್ಲಿ ನಿತ್ಯ ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟವಾಗುತ್ತಿದೆ. ಇದರಿಂದಾಗಿ ರೈತರು ರೋಸಿ ಹೋಗಿದ್ದು, ಭತ್ತದ ಕೃಷಿಯನ್ನೇ ಕೈಬಿಡಲು ಮುಂದಾಗಿದ್ದಾರೆ.

ಕಾಡಾನೆ ದಾಳಿಗೆ ಸಿಲುಕಿ ಮಾನವ ಪ್ರಾಣಹಾನಿಯಾದ ಸಂದರ್ಭದಲ್ಲಿ ಮಾತ್ರ ಎಚ್ಚೆತ್ತುಕೊಳ್ಳುವ ಜನಪ್ರತಿನಿಧಿಗಳು, ಮೃತರ ಕುಟುಂಬಕ್ಕೆ ಪರಿಹಾರ ನೀಡಿ, ಮರುದಿನ ಒಂದು ಕಾಡಾನೆಯನ್ನು ಹಿಡಿದು ಬೇರೆಡೆಗೆ ಸಾಗಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಸಚಿವರು ಸೂತಕದ ಮನೆಗೆ ಬಂದು ಸಾಂತ್ವನ ಹೇಳಿ, ಸ್ಥಳೀಯರು ಮತ್ತು ಅರಣ್ಯ ಇಲಾಖೆ ಅಧಿಕಾರಗಳೊಂದಿಗೆ ಸಭೆ ನಡೆಸಿ, ಹಾಲುತುಪ್ಪ ಬಿಟ್ಟು, ‘ನಿಮ್ಮ ಪಾಡಿಗೆ ನೀವು, ನಮ್ಮ ಪಾಡಿಗೆ ನಾವು’ ಎಂಬಂತೆ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ರೈತರು ದೂರುತ್ತಿದ್ದಾರೆ.

ಕಾಡಾನೆಗಳ ಹಾವಳಿಯಿಂದ ನಷ್ಟವಾಗುತ್ತಿರುವ ಬೆಳೆಗೆ ಸರ್ಕಾರ ನಿಯಮಾನುಸಾರ ಕೊಡುವ ಪರಿಹಾರ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದ್ದರೆ ಸಾವಿರ ರೂಪಾಯಿ ಪರಿಹಾರ ದೊರಕುತ್ತದೆ. ಇಂತಹ ಪರಿಹಾರ ಪಡೆದು ಏನು ಫಲ ಎಂದು ಬಹುತೇಕ ರೈತರು ಪರಿಹಾರಕ್ಕೆ ಕೈ ಚಾಚುವುದನ್ನು ಬಿಟ್ಟಿದ್ದಾರೆ.

ADVERTISEMENT

ಐದು ದಶಕಗಳಿಂದ ಕಾಡಾನೆ ಹಾವಳಿ ಆಲೂರು ತಾಲ್ಲೂಕಿಗೆ ಮೀಸಲಾಗಿತ್ತು. ಆದರೆ, ಕೆಲ ವರ್ಷಗಳಿಂದೀಚೆಗೆ ಸಕಲೇಶಪುರ ಮತ್ತು ಬೇಲೂರು ತಾಲ್ಲೂಕುಗಳಿಗೂ ಹಾವಳಿ ವ್ಯಾಪಿಸಿದೆ. ಆನೆ ದಾಳಿಯಿಂದ ಆಲೂರು ತಾಲ್ಲೂಕಿನಲ್ಲಿ 70ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನಾಲ್ಕಾರು ಆನೆಗಳು ಜೀವತೆತ್ತಿವೆ.

ಹಿನ್ನೀರಿನಿಂದ ನಾಡಿಗೆ ಬಂದ ಗಜಪಡೆ: ಮೊದಲು ಹೇಮಾವತಿ ನದಿ ಹರಿಯುವ ಪ್ರದೇಶದ ಅಕ್ಕಪಕ್ಕದ ದಟ್ಟ ಕಾಡಿನಲ್ಲಿ ಕಾಡಾನೆಗಳು ಇದ್ದವು. ಹತ್ತಾರು ವರ್ಷಕ್ಕೊಮ್ಮೆ ಆಕಸ್ಮಿಕವಾಗಿ ಹೊರ ಬರುತ್ತಿದ್ದವು. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಕೆಲವರ ಜಮೀನಿನಲ್ಲಿ ಹಾದು ಹೋದ ಸಂದರ್ಭದಲ್ಲಿ, ಆನೆ ಪಾದ ಇಟ್ಟ ಜಾಗಕ್ಕೆ ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸುತ್ತಿದ್ದರು.

70ರ ದಶಕದಲ್ಲಿ ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಿದ ನಂತರ ಕಾಡಾನೆ–ಮಾನವ ಸಂಘರ್ಷ ಆರಂಭವಾಯಿತು. ಹಿನ್ನೀರು ಆವರಿಸಿದ್ದರಿಂದ ದಟ್ಟ ಕಾಡಿನಲ್ಲಿದ್ದ ಆನೆಗಳು ಅನ್ಯ ಮಾರ್ಗವಿಲ್ಲದೇ ಕಾಡಿನ ಅಂಚಿಗೆ ಬಂದವು. ಬ್ಯಾಬ ಅರಣ್ಯ‌‌‌ ‌‌‌ಪ್ರದೇಶದಲ್ಲಿ ಬಹುತೇಕ ಭಾಗವನ್ನು ಮುಳುಗಡೆ ಸಂತ್ರಸ್ತರಿಗೆ ಹಂಚಲಾಯಿತು. ಆನೆಗಳಿಗೆ ಮೀಸಲಾಗಿದ್ದ ಕಾಡು ಇಲ್ಲದೇ, ಇಷ್ಟದ ಹಲಸು, ಬಿದಿರು ಇನ್ನಿತರ ಆಹಾರದ ಕೊರತೆಯಾಯಿತು ಎಂದು ರೈತರೊಬ್ಬರು ವಿವರಿಸಿದರು.

ಎತ್ತಿನಹೊಳೆ ಯೋಜನೆಯಿಂದ, ಅಲ್ಲಿದ್ದ ಕಾಡಾನೆಗಳು ಬೇರೆ ಮಾರ್ಗವಿಲ್ಲದೇ ಆಹಾರಕ್ಕಾಗಿ ಸಕಲೇಶಪುರ ತಾಲ್ಲೂಕಿಗೆ ಲಗ್ಗೆ ಇಟ್ಟವು. ಅವುಗಳನ್ನು ಅತ್ತಿಂದಿತ್ತ ಓಡಿಸುತ್ತಿರುವುದರಿಂದ ವಿಸ್ತಾರವಾದ ಕಾಫಿ ತೋಟ ಹೊಂದಿರುವ ಬೇಲೂರು ಮತ್ತು ಆಲೂರು ತಾಲ್ಲೂಕುಗಳ ಕೆಲ ಭಾಗದಲ್ಲಿ ಈಗ ಆನೆಗಳು ಬೀಡುಬಿಟ್ಟಿವೆ.

ಆಲೂರು ತಾಲ್ಲೂಕಿನಲ್ಲಿ ಭತ್ತದ ಗದ್ದೆಗಳಿಗೆ ಕಾಡಾನೆಗಳು ನುಗ್ಗಿದ್ದರಿಂದ ಬೆಳೆ ಹಾಳಾಗಿದೆ.        
ನಾಲ್ಕು ಎಕರೆ ಗದ್ದೆಯಲ್ಲಿ ಭತ್ತ ಬಿತ್ತಿದೆ. ಚೆನ್ನಾಗಿ ಹುಟ್ಟಿತ್ತು. ವಾರದಿಂದ ಕಾಡಾನೆಗಳು ತುಳಿದು ನಾಶ ಮಾಡಿವೆ. ತಿನ್ನುವ ಅನ್ನದ ಜೊತೆಗೆ ಜೀವನ ಮಣ್ಣು ಪಾಲಾಯಿತು. ನಮಗೆ ಪರಿಹಾರ ಬೇಡ. ಕಾಡಾನೆಗಳನ್ನು ಸ್ಥಳಾಂತರಿಸಬೇಕು
ಜಾನ್‍ಸಿಲ್ ಕ್ರಾಸ್ತ ಬಿಳುಗವಳ್ಳಿ ಮಾಜಿ ಸೈನಿಕ
ಭುವನೇಶ್ವರಿ ಕಾಡಾನೆಗಳ ಗುಂಪು ಬಿಳಗವಳ್ಳಿ ಬಳಿ ಬೀಡು ಬಿಟ್ಟಿವೆ. ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಭೀತರಾಗಿ ನಿತ್ಯ ಬದುಕಿಗೆ ತೊಂದರೆಯಾಗಿದೆ. ಕಾರ್ಮಿಕರಿಗೆ ಸರ್ಕಾರ ನೆರವು ನೀಡಬೇಕು
ಮಂಜುನಾಥ್ ಕಾಮತಿಯ ಸಾಮಾಜಿಕ ಹೋರಾಟಗಾರ
3–4 ವರ್ಷಗಳಿಂದ ಭತ್ತ ಶುಂಠಿ ಇತರೆ ಬೆಳೆಗಳು ಕಾಡಾನೆಗಳ ಹಾವಳಿಗೆ ಸಿಲುಕಿ ನಷ್ಟ ಅನುಭವಿಸುತ್ತಿದ್ದೇವೆ. ಅರಣ್ಯ ಇಲಾಖೆ ಕೊಡುವ ಪರಿಹಾರ ಒಂದು ದಿನದ ಊಟಕ್ಕೆ ಸಾಲುವುದಿಲ್ಲ. ಕಾಡಾನೆ ಸ್ಥಳಾಂತರಿಸದಿದ್ದರೆ ಹೋರಾಟ ಅನಿವಾರ್ಯ
ಸೀನ ಬಿಳುಗವಳ್ಳಿ ರೈತ
ಕಾಡಾನೆಗಳು ಯಾವ ಸಂದರ್ಭದಲ್ಲಿ ಮನುಷ್ಯರ ಮೇಲೆ ಎರಗುತ್ತವೆ ಎಂಬುದು ತಿಳಿಯುತ್ತಿಲ್ಲ. ಒಂದೆಡೆ ತೋಟದ ಕೆಲಸವಾಗುತ್ತಿಲ್ಲ. ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲ ಆನೆಗಳ ಸ್ಥಳಾಂತರ ಬಿಟ್ಟರೆ ಅನ್ಯ ಮಾರ್ಗವಿಲ್ಲ
ಗೋಪಿಕೃಷ್ಣ ಹಿರುವಾಟೆ ಗ್ರಾಮದ ಕಾಫಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.