ADVERTISEMENT

ಬೇಲೂರು: ಶಿಲ್ಪಕಲೆಯ ತವರಿನಲ್ಲಿ ಸಂತೆಗಿಲ್ಲ ಶಾಶ್ವತ ಸ್ಥಳ

ಮುಜರಾಯಿ ಇಲಾಖೆಯ ಜಾಗದಲ್ಲಿ ತಾತ್ಕಾಲಿಕ ವ್ಯವಸ್ಥೆ: ಮೂಲಸೌಕರ್ಯದ ಕೊರತೆ

ಮಲ್ಲೇಶ
Published 2 ಜೂನ್ 2025, 6:21 IST
Last Updated 2 ಜೂನ್ 2025, 6:21 IST
ಬೇಲೂರಿನಲ್ಲಿ ಸಂತೆಗೆ ಜಾಗ ಕಿರಿದಾಗಿರುವುದರಿಂದ ರಸ್ತೆಯಲ್ಲಿ ಅಂಗಡಿ ಹಾಕಲಾಗುತ್ತಿದ್ದು, ವಾಹನ ದಟ್ಟಣೆ ಹೆಚ್ಚಾಗುತ್ತಿದೆ.
ಬೇಲೂರಿನಲ್ಲಿ ಸಂತೆಗೆ ಜಾಗ ಕಿರಿದಾಗಿರುವುದರಿಂದ ರಸ್ತೆಯಲ್ಲಿ ಅಂಗಡಿ ಹಾಕಲಾಗುತ್ತಿದ್ದು, ವಾಹನ ದಟ್ಟಣೆ ಹೆಚ್ಚಾಗುತ್ತಿದೆ.   

ಬೇಲೂರು: ಐತಿಹಾಸಿಕ ಮಹತ್ವ ಹೊಂದಿರುವ ಶಿಲ್ಪಕಲೆಯ ತವರೂರಿನಲ್ಲಿ ಸಂತೆಗೆ ಶಾಶ್ವತ ಸ್ಥಳವಿಲ್ಲದೇ, ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಪರದಾಡುವಂತಾಗಿದೆ.

ಪ್ರತಿ ಸೋಮವಾರ ನಡೆಯುವ ಸಂತೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಸಂತೆಯ ದಿನ ಪಟ್ಟಣದಲ್ಲಿ ಜನದಟ್ಟಣೆ ಅಧಿಕವಾಗಿರುತ್ತದೆ. ಸಂತೆಗಾಗಿಯೇ ಸುತ್ತಲಿನ ಹಾಗೂ ಪಟ್ಟಣದ ಕಾರ್ಮಿಕರಿಗೆ ರಜೆ ದೊರೆಯುತ್ತದೆ. ಬೇಲೂರಿನ ಸಂತೆಯಲ್ಲಿ ತರಕಾರಿ, ದಿನಸಿ, ಹಣ್ಣು, ಮೀನು, ಮಂಗಳೂರಿನ ಬಗೆಬಗೆಯ ಒಣಮೀನುಗಳು, ಮನೆಗೆ ಬೇಕಾಗುವ ಸಣ್ಣಪುಟ್ಟ ವಸ್ತುಗಳು, ಕೃಷಿ ಸಲಕರಣೆಗಳು, ಪುರಿ, ಖಾರ, ಸಿಹಿ ತಿಂಡಿಗಳ ವ್ಯಾಪಾರ ಜೋರಾಗಿ ನಡೆಯುತ್ತದೆ.

ಸಾಕಷ್ಟು ವರ್ಷಗಳ ಹಿಂದೆ ಪಟ್ಟಣದ ಜೂನಿಯರ್ ಕಾಲೇಜು ಬಳಿ ಸಂತೆ ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ಕಾರಣದಿಂದ, ಈಗ ದೇಗುಲದ ಹಿಂಭಾಗದ  ಮುಜರಾಯಿ ಇಲಾಖೆ ಜಾಗದಲ್ಲಿ ತಾತ್ಕಾಲಿಕವಾಗಿ ಸಂತೆ ನಡೆಯುತ್ತಿದೆ. ಇಲ್ಲಿಯೂ ಮೂಲ ಸೌಲಭ್ಯಗಳಿಲ್ಲದೇ ತೊಂದರೆಯಾಗುತ್ತಿದೆ.

ADVERTISEMENT

ರಸ್ತೆಯ ಬದಿಗಳಲ್ಲಿ ಸಂತೆ ನಡೆಯುತ್ತಿದ್ದು, ಸಂಚಾರ ದಟ್ಟಣೆ ಉಂಟಾಗುತ್ತಿದೆ. ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಸರಿಯಾದ ಕಟ್ಟೆಗಳು, ಮೇಲ್ಚಾವಣಿ ಇಲ್ಲ. ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಟಾರ್ಪಾಲ್‌ ಹಾಕಿಕೊಳ್ಳುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲವಾಗಿದೆ ಎಂದು ವ್ಯಾಪಾರಿಗಳು ದೂರುತ್ತಿದ್ದಾರೆ.

ಮಳೆ ಬಂತೆಂದರೆ, ತಿರುಗಾಡುವುದೂ ಕಷ್ಟವಾಗುತ್ತದೆ. ವ್ಯಾಪಾರದ ಸ್ಥಳವು ಕೆಸರುಮಯವಾಗುತ್ತಿದೆ. ಗ್ರಾಹಕರು ಪರದಾಡುವಂತಾಗಿದೆ ಎಂದು ಜನರು ಹೇಳುತ್ತಿದ್ದಾರೆ.   

ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಯಲ್ಲಿ ಸರಿಯಾದ ಜಾಗವಿಲ್ಲದೇ ರಸ್ತೆಯಲ್ಲೇ ವ್ಯಾಪಾರ, ವಹಿವಾಟು ನಡೆಯುತ್ತಿವೆ. ಇದರಿಂದ ವಾಹನ ದಟ್ಟಣೆ ಅಧಿಕವಾಗುತ್ತಿದೆ. ಸಂತೆಯ ಸಮೀಪ ಐದು ಶಾಲೆಗಳಿದ್ದು, ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿದೆ ಎಂದು ಗ್ರಾಹಕಿ ಕಾವ್ಯಾ ಹೇಳುತ್ತಾರೆ.

ಸಂತೆಯಲ್ಲಿ ಮೂಲಸೌಕರ್ಯಗಳಿಲ್ಲ. ಸುಂಕ ವಸೂಲಿ ಮಾತ್ರ ಮಾಡುತ್ತಾರೆ. ಕೂರಲು ಪುರಸಭೆಯವರು ಮಣ್ಣು ಹಾಕಿ ಕಟ್ಟೆ ಮಾಡಿಕೊಟ್ಟಿದ್ದರು. ಆದರೆ ಅಕ್ಕಪಕ್ಕದ ಲೇಔಟ್‌ನವರು ಆ ಮಣ್ಣನ್ನೂ ತೆಗೆದುಕೊಂಡು ಹೋಗಿದ್ದಾರೆ.
ಶ್ರೀಧರ್ ನಿಂಬೆಹಣ್ಣು ವ್ಯಾಪಾರಿ
ರಸ್ತೆ ಪಕ್ಕದಲ್ಲಿ ನಡೆಯುತ್ತಿರುವ ವ್ಯಾಪರ ವಹಿವಾಟುಗಳನ್ನು ಸಂತೆ ಜಾಗದಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಗುಂಡಿ ಬಿದ್ದ ಜಾಗಗಳನ್ನು ಮಣ್ಣು ತುಂಬಿಸಲಾಗಿದೆ. ಸದ್ಯದಲ್ಲೇ ಕಟ್ಟೆ ಮೂಲಸೌಕರ್ಯ ಒದಗಿಸಲಾಗುವುದು
ಸುಜಯ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ
ಸಂತೆಗಾಗಿ ಪಟ್ಟಣಕ್ಕೆ ಹತ್ತಿರವಿರುವ ಜಾಗ ಗುರುತಿಸಿ ಕೊಡುವಂತೆ ಕಂದಾಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಂತೆಯನ್ನು ಸ್ಥಳಾಂತರ ಮಾಡಿ ಮುಜುರಾಯಿ ಜಾಗದಲ್ಲಿ ದೇಗುಲದ ಅಭಿವೃದ್ಧಿ ಮಾಡಲಾಗುವುದು.
ಎಚ್.ಕೆ. ಸುರೇಶ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.