ಶ್ರವಣಬೆಳಗೊಳ: ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ರಥೋತ್ಸವದ ಪ್ರಯುಕ್ತ ಮೋಕ್ಷ ಕಲ್ಯಾಣ, ಸಿದ್ಧಚಕ್ರ ವಿಧಾನ, ಬಾಹುಬಲಿ ಸ್ವಾಮಿಗೆ ಪಾದಪೂಜೆ, ತೆಪ್ಪೋತ್ಸವದ ಸಕಲ ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಸನ್ನಿಧಿಯಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಭಗವಾನ್ ನೇಮಿನಾಥ ತೀರ್ಥಂಕರರ ಮೋಕ್ಷ ಕಲ್ಯಾಣದ ವಿಧಿಗಳನ್ನು ನೆರವೇರಿಸಿದ ನಂತರ, ಸಿದ್ಧಚಕ್ರ ವಿಧಾನಕ್ಕೆ ಅರ್ಘ್ಯ, ಶ್ರೀಫಲ, ಶಾಂತಿಧಾರಗಳನ್ನು ಶ್ರೀಗಳು ಅರ್ಪಿಸಿದರು. ಜಾತ್ರೆಯ ನಿಮಿತ್ತ ವಿಂಧ್ಯಗಿರಿಯ ಬಾಹುಬಲಿ ಬೆಟ್ಟದಲ್ಲಿರುವ ಬಾಹುಬಲಿ ಸ್ವಾಮಿಗೆ ವಿಶೇಷ ಪಂಚಾಮೃತ ಪೂಜೆಗಳನ್ನು ನೆರವೇರಿಸಿ, ಶಾಂತಿಧಾರಾ ಮಾಡಲಾಯಿತು.
ಭಗವಾನ್ ನೇಮಿನಾಥ ತೀರ್ಥಂಕರ ಮತ್ತು ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಯ ಉತ್ಸವ ಮೂರ್ತಿಗಳನ್ನು ಜೈನಮಠದ ಮುಂಭಾಗದಿಂದ ವಿವಿಧ ಮಂಗಲ ವಾದ್ಯಗಳೊಂದಿಗೆ ಕಲ್ಯಾಣಿಗೆ ತರಲಾಯಿತು.
ದೇವರಾಜ ಒಡೆಯರ್ ಕಲ್ಯಾಣಿಯಲ್ಲಿ ಅಲಂಕರಿಸಿ ಸಿದ್ಧಗೊಂಡಿದ್ದ ನೂತನ ಹಂಸಪಕ್ಷಿ ವಾಹನದಲ್ಲಿ ಪ್ರತಿಷ್ಠಾಪಿಸಿ, ತೆಪ್ಪೋತ್ಸವ ನಡೆಸಲಾಯಿತು. ತೆಪ್ಪೋತ್ಸವಕ್ಕೂ ಮುಂಚಿತವಾಗಿ ಹಂಸಪಕ್ಷಿ ತೆಪ್ಪದಲ್ಲಿದ್ದ ತೀರ್ಥಂಕರರಿಗೆ ಹಾಗೂ ಯಕ್ಷಿ ಕೂಷ್ಮಾಂಡಿನಿ ದೇವಿಗೆ ಧಾರ್ಮಿಕ ವಿಧಿಗಳನ್ನು ನಡೆಸಿ ಮಹಾಮಂಗಳಾರತಿ ಮಾಡಲಾಯಿತು.
ತೆಪ್ಪೋತ್ಸವವು ಮಂಗಲ ವಾದ್ಯಗಳೊಂದಿಗೆ ಕಲ್ಯಾಣಿಯಲ್ಲಿ 3 ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಅಭಿನವ ಚಾರುಕೀರ್ತಿ ಶ್ರೀಗಳು, ಪುರೋಹಿತರು, ಸೇವಾಕರ್ತರು ಪಾಲ್ಗೊಂಡಿದ್ದರು. ಕಲ್ಯಾಣಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಂತರ ಸಂಗೀತದ ಸೇವೆ ನೆರವೇರಿತು.
ತೆಪ್ಪೋತ್ಸವದ ಸೇವಾಕರ್ತರಾದ ಪದ್ಮಾವತಮ್ಮ ಕೆ.ಪಿ.ಧರಣಪ್ಪ ಸೇವಾ ಟ್ರಸ್ಟ್‌ನ ಪೂರ್ಣಿಮಾ ಅನಂತಪದ್ಮನಾಭ್ ಹಾಗೂ ಮಂಡ್ಯದ ಶ್ರೇಯಾಂಸ ಕುಮಾರ್ ಅವರನ್ನು ಗೌರವಿಸಲಾಯಿತು. ನೇಮಿನಾಥ ಸ್ವಾಮಿ ಭಕ್ತರಿಂದ ಪ್ರಸಾದ ವಿನಿಯೋಗ ನಡೆಯಿತು.
ಚಿಕ್ಕದೇವರಾಜ ಒಡೆಯರ್ ಕಲ್ಯಾಣಿ
ಶತಮಾನಗಳ ಇತಿಹಾಸದ ಚಂದ್ರಗಿರಿಯ ಚಿಕ್ಕಬೆಟ್ಟ ವಿಂಧ್ಯಗಿರಿಯ ದೊಡ್ಡಬೆಟ್ಟಗಳ ನಡುವೆ ಕಂಗೊಳಿಸುವ ಕಲ್ಯಾಣಿಯನ್ನು ಮೈಸೂರು ಮಹಾರಾಜ ಚಿಕ್ಕದೇವರಾಜ ಒಡೆಯರ್ ಆಳ್ವಿಕೆಯ ಕಾಲದ ಕ್ರಿ.ಶ.17ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಚಿಕ್ಕದೇವರಾಜ ಒಡೆಯರ್ ಕಲ್ಯಾಣಿ ಎಂದೇ ಪ್ರಸಿದ್ಧಿ ಪಡೆದಿದೆ. ದಕ್ಷಿಣದಿಂದ ಉತ್ತರಕ್ಕೆ 117 ಮೀಟರ್ ಪೂರ್ವದಿಂದ ಪಶ್ಚಿಮಕ್ಕೆ 176 ಮೀಟರ್ ಇದ್ದು 20 ಅಡಿ ಆಳ ಮತ್ತು 586 ಮೀಟರ್ ಸುತ್ತಳತೆ ಹೊಂದಿದೆ. ಕಲ್ಯಾಣಿಯ ಪ್ರತಿ ದಿಕ್ಕಿನಲ್ಲಿಯೂ 27 ಮೆಟ್ಟಿಲುಗಳಿದ್ದು 3 ಕಡೆಯಿಂದಲೂ ಪ್ರವೇಶ ದ್ವಾರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.