ಕೊಣನೂರು: ಮಳೆ ವಿಳಂಭದಿಂದಾಗಿ ಹೊಗೆಸೊಪ್ಪು ಬೆಳೆಗಾರರು ನಾಟಿ ಮಾಡಲು ಮಳೆಗಾಗಿ ಆಕಾಶದತ್ತ ನೋಡು ಪರಿಸ್ಥಿತಿ ಎದುರಾಗಿದೆ.
ಹೊಗೆಸೊಪ್ಪನ್ನು ಹೆಚ್ಚೆಚ್ಚು ಬೆಳೆಯುವ ಕೊಣನೂರು ಮತ್ತು ರಾಮನಾಥಪುರ ವ್ಯಾಪ್ತಿಯ ಹೊಗೆಸೊಪ್ಪು ಬೆಳೆಗಾರರು ಕಳೆದೆರಡು ತಿಂಗಳಿನಿಂದ ಸಸಿಮಡಿಗಳನ್ನು ಬೆಳೆಸಿ ನಾಟಿಗಾಗಿ ತುದಿಗಾಲಿನಲ್ಲಿ ನಿಂತಿದ್ದು, ಮಳೆಯಿಲ್ಲದೆ ಹಿನ್ನಡೆ ಅನುಭವಿಸುತ್ತಿದ್ದಾರೆ.
ಕೆಲದಿನಗಳ ಹಿಂದೆ ಒಂದೆರಡು ಭಾರಿ ಮಳೆ ಸುರಿದಿದ್ದರಿಂದ ಹೊಲಗಳನ್ನು ಉತ್ತು, ಗೊಬ್ಬರ ಮಿಶ್ರಮಾಡಿ ಹಸನುಮಾಡಿಕೊಂಡು ನಾಟಿಗಾಗಿ ಸಿದ್ಧಪಡಿಸಿಕೊಂಡಿದ್ದರೆ, ಎಲ್ಲೆಂದರಲ್ಲಿ ಅನಿಯಮಿತವಾಗಿ ಬೀಳುವ ಅಡ್ಡ ಮಳೆಯ ಪರಿಣಾಮ ಕೆಲವೆಡೆ ಮಳೆಯಾಗದೆ ಜಮೀನನ್ನು ಉಳುಮೆ ಮಾಡಲು ಆಗಿಲ್ಲ.
ಈಗಾಗಲೇ ಹೊಗೆಸೊಪ್ಪು ಸಸಿಗಳನ್ನು ಬೆಳೆಸಿ , ಮಳೆ ತಡವಾದರೂ ಟ್ರೇ ನಲ್ಲಿಟ್ಟು ಕಾಪಾಡಿಕೊಂಡು ಮಳೆಗಾಗಿ ಕಾಯುತ್ತಿದ್ದು ಮಳೆ ಸುರಿಯವುದು ಇನ್ನೂ ತಡವಾದಲ್ಲಿ ಸಸಿಗಳು ಬಲಿತು ರೋಗಪೀಡಿತವಾಗುವ ಭಯ ಬೆಳೆಗಾರರನ್ನು ಕಾಡುತ್ತಿದೆ.
ನೀರಾವರಿ ಸೌಲಭ್ಯವಿರುವ ಕೆಲವೇ ಬೆಳೆಗಾರರು ಈಗಾಗಲೇ ಹೊಗೆಸುಪ್ಪು ನಾಟಿಮಾಡಿದ್ದು, ಮಳೆಯಾಶ್ರಿತ ಜಮೀನಿನ ಹೊಗೆಸೊಪ್ಪು ಬೆಳೆಗಾರರು ಮಳೆಯ ಅಭಾವದಿಂದಾಗಿ ಆಕಾಶ ಕಡೆಗೆ ನೋಡುತ್ತಾ ಇಂದಾದರೂ ಮಳೆ ಬರಬಹುದೇ ಎಂದು ಕಾಯುತ್ತಿದ್ದಾರೆ.
ಸಸಿಗಳು ಬಲಿತು ಹಾಳಾಗುವುದನ್ನು ತಪ್ಪಿಸಲು ಮಳೆಯಾಶ್ರಿತ ಜಮೀನಿನ ಕೆಲ ರೈತರು ಅಕ್ಕಪಕ್ಕದಲ್ಲಿನ ಬೋರ್ವೆಲ್ ನೀರಿನಿಂದ ನೀರು ಹಾಯಿಸಿಕೊಂಡು ನಾಟಿ ಮಾಡಲು ಪ್ರಾರಂಭಿಸಿದ್ದು, ನಾಟಿಯಾದ ನಂತರ ತುಂತುರು ನೀರಾವರಿ ಮೂಲಕ ಸಸಿಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.
ತಾಪಮಾನ ಏರಿಕೆ ಮತ್ತು ಮಳೆಯ ಅಭಾವದಿಂದಾಗಿ ಹೊಗೆಸೊಪ್ಪು ಸಸಿಗಳಿಗೆ ವಿವಿಧ ರೋಗಗಳು ತಗಲುವ ಸಾಧ್ಯತೆಯಿದ್ದು ಕಾಲಕಾಲಕ್ಕೆ ಅಗತ್ಯ ಔಷಧಿಗಳನ್ನು ಸಿಂಪಡಿಸಿಕೊಂಡು ಸಸಿಗಳಲ್ಲಿ ರೋಗ ಹತೋಟಿಗೆ ಮುಂದಾಗಬೇಕು. ಮಡಿಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆದಿರುವ ಸಸಿಗಳ ಎಲೆಗಳನ್ನು ಚಿಗುಟಿ ಹತೋಟಿಯಲ್ಲಿಡಬೇಕು ಎನ್ನುತ್ತಾರೆ ತಂಬಾಕು ಮಾರುಕಟ್ಟೆಯ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.