ಹಾಸನ: ‘ನಿಮಗೆ ₹54 ಸಾವಿರ ಸಂಬಳ. ಯಾವ ಕೆಲಸ ಮಾಡದೇ ತರಬೇತಿಯಲ್ಲಿ ಅಷ್ಟು ಸಂಬಳ ಪಡೆಯುತ್ತಿದ್ದೀರಿ. ಆದರೆ, ಸರಿಯಾಗಿ ಡ್ರಿಲ್ ಮಾಡಲೂ ಬರುವುದಿಲ್ಲ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ ಘಟನೆ ತಾಲ್ಲೂಕಿನ ಶಾಂತಿಗ್ರಾಮದ ಪೊಲೀಸ್ ತರಬೇತಿ ಶಾಲೆಯಲ್ಲಿ ಬುಧವಾರ ನಡೆಯಿತು.
ಭೇಟಿ ನೀಡಿದ ವೇಳೆ, ಕಾನ್‌ಸ್ಟೆಬಲ್ ನೇಮಕಾತಿ ಹೊಂದಿ ತರಬೇತಿಗೆ ಹಾಜರಾಗಿರುವ ಸಿಬ್ಬಂದಿಯ ಡ್ರಿಲ್ ಪರೀಕ್ಷಿಸಿ, ‘ಮೂರು ತಿಂಗಳು ತರಬೇತಿ ಆಗಿದೆ. ಅಟೆನ್ಷನ್ ಕೂಡ ಸರಿಯಾಗಿ ಮಾಡಲು ಬರುತ್ತಿಲ್ಲ. ಏನ್ರಿ ಕಲ್ತಿದ್ದೀರಾ? ನಿಮ್ಮ ಮೇಲೆ ಕ್ರಮ ಆಗಬೇಕು’ ಎಂದರು. ‘ಅಧಿಕಾರಿಗಳೂ ಸರಿಯಾಗಿ ತರಬೇತಿ ನೀಡಿಲ್ಲ’ ಎಂದೂ ಹೇಳಿದರು.
ನಂತರ, ಖುದ್ದು ಡ್ರಿಲ್ ಕಾಷನ್ ಕೊಡಿಸಿ, ಅಟೆನ್ಷನ್ ಮಾಡಿ ತೋರಿಸಿದರು. ‘ಸರಿಯಾಗಿ ತರಬೇತಿ ಪಡೆಯದಿದ್ದರೆ ಔಟ್ ಪಾಸ್ ಕೊಡಬೇಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಬೇರೆ ರಾಜ್ಯಗಳಲ್ಲಿ ತರಬೇತಿ ವೇಳೆ ಭತ್ಯೆ ಮಾತ್ರ ನೀಡುತ್ತಾರೆ. ಆದರೆ ಕರ್ನಾಟಕ ಸರ್ಕಾರ ತರಬೇತಿ ಅವಧಿಯಲ್ಲೂ ಪೊಲೀಸರನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.