ಆಲೂರು: ಮೂರು ತಾಲ್ಲೂಕು ಸಮ್ಮೇಳನಗಳ ಖರ್ಚು–ವೆಚ್ಚಗಳನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲ್ಲೂಕು ಘಟಕ ಪಾರದರ್ಶಕವಾಗಿ ನೀಡಿರುವುದು ಸ್ತುತ್ಯರ್ಹ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು–ನುಡಿ ಹೆಸರಿನಲ್ಲಿ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳುವ, ಅಧಿಕಾರಶಾಹಿ ವ್ಯಕ್ತಿಗಳನ್ನು ಸಮಾಜ ಖಂಡಿಸಬೇಕಿದೆ. ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಪ್ರಾರಂಭದಿಂದಲೂ ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸಲು ಸರಳ ಹಾಗೂ ಗುಣಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ ಎಂದರು.
ವೇದಿಕೆಯ ಪೋಷಕ ಡಾ.ಎಂ.ಇ. ಜಯರಾಜ್ ಮಾತನಾಡಿ, ವೇದಿಕೆಯ ವತಿಯಿಂದ ಮೇ ನಲ್ಲಿ ಮುಂಬೈನಲ್ಲಿ ನಡೆದ ಅಖಿಲ ಭಾರತ ಸಮ್ಮೇಳನವನ್ನು ಮರೆಯುವಂತಿಲ್ಲ. ಹೊರರಾಜ್ಯದಲ್ಲಿಯೂ ತನ್ನ ಛಾಪು ಮೂಡಿಸಿದೆ ಎಂದರು.
ವೇದಿಕೆಯ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎಂ. ಬಾಲಕೃಷ್ಣ ಮಾತನಾಡಿ, ಸಾಹಿತ್ಯ ವೇದಿಕೆ ಮೊದಲಿನಿಂದಲೂ ಸಾಧಕರನ್ನು ಪ್ರೋತ್ಸಾಹಿಸುತ್ತ, ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತ ಬಂದಿದೆ. ಮುಂದೆಯೂ ನಮ್ಮ ಸ್ಪಂದನೆ ನಿರಂತರವಾಗಿರುತ್ತದೆ ಎಂದರು.
ತಾಲ್ಲೂಕು ಕಾರ್ಯದರ್ಶಿ ಧರ್ಮ ಕೆರಲೂರು ವಾರ್ಷಿಕ ವರದಿ ಮಂಡನೆ ಮಾಡಿದರು. ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಉಪಾಧ್ಯಕ್ಷ ಟಿ.ಕೆ.ನಾಗರಾಜ್ ಹಾಗೂ ಸಂಘಟನಾ ಕಾರ್ಯದರ್ಶಿ ಡಿ.ಸಿ.ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟಿ ವಾಸು ಸಮುದ್ರವಳ್ಳಿ, ಪತ್ರಿಕಾ ಕಾರ್ಯದರ್ಶಿ ಎಚ್.ಡಿ. ಪ್ರದೀಪ್, ದಲಿತ ಮುಖಂಡ ಅರಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.