ಹಾಸನ: ಪ್ರಯಾಣಿಕ ಆಟೋ ರಿಕ್ಷಾಗಳ ಮೂಲಕ ಸರಕು ಸಾಗಣೆ ಮಾಡುವುದನ್ನು ನಿಯಂತ್ರಿಸುವಂತೆ ಎಂದು ಆಗ್ರಹಿಸಿ ಗೂಡ್ಸ್ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಸದಸ್ಯರು, ‘ನಗರ ಹಾಗೂ ಜಿಲ್ಲೆಯ ಇತರೆ ಪಟ್ಟಣ ಹಾಗೂ ಗ್ರಾಮಗಳಲ್ಲಿ ಪ್ರಯಾಣಿಕ ಆಟೋ ಚಾಲಕರು ಸರಕು ಸಾಗಣೆ ಮಾಡುತ್ತಿದ್ದಾರೆ. ಇದರಿಂದ ಗೂಡ್ಸ್ ಆಟೋವನ್ನು ನಂಬಿ ಜೀವನ ಸಾಗಿಸುತ್ತಿರುವ ನಮ್ಮಂತಹ ಸಾವಿರಾರು ಮಂದಿ ಚಾಲಕರು ಹಾಗೂ ಮಾಲೀಕರಿಗೆ ತೊಂದರೆ ಉಂಟಾಗಿದೆ. ಪ್ರಯಾಣಿಕ ಆಟೋಗಳಲ್ಲಿ ಸರಕು ಸಾಗಣೆ ಮಾಡದಂತೆ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಮುಂದಿನ ದಿನಗಳಲ್ಲಿ ಅಕ್ರಮವಾಗಿ ಪ್ರಯಾಣಿಕ ಆಟೋದವರು ಸರಕು ಸಾಗಣೆ ಮಾಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕಡ್ಡಾಯವಾಗಿ ಸರಕು ಸಾಗಣೆ ಮಾಡದಂತೆ ಚಾಲಕರಿಗೆ ಹಾಗೂ ಮಾಲೀಕರಿಗೆ ನಿರ್ದೇಶನ ನೀಡಬೇಕು’ ಎಂದು ತಹಶೀಲ್ದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
ಗೂಡ್ಸ್ ಆಟೋ ಚಾಲಕರಾದ ಪಾಂಡುರಂಗ, ಫಯಾಜ್, ಶಿವಣ್ಣ, ರವಿ, ವೇದಮೂರ್ತಿ, ಪ್ರವೀಣ್, ಪರಮೇಶ್, ಹರೀಶ್, ಚಂದ್ರಶೇಖರ್, ಮಹೇಶ್, ಸಣ್ಣ ಸ್ವಾಮಿ, ಸತೀಶ್, ರಂಗಸ್ವಾಮಿ, ಫೈಝುಲ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.